

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಎರ್ಮಾಳು ತೆಂಕ ವ್ಯಾಪ್ತಿಯ ತೊಟ್ಟಂ ಪರಿಸರದ ಸರ್ಕಾರಿ ಭೂಮಿ ಒತ್ತುವರಿ ಮಾಡಿ ಸಿಆರ್‌ಜಡ್ ವಲಯದಲ್ಲಿ ರೆಸಾರ್ಟ್ ಮಾಲೀಕರು ಅನಧಿಕೃತ ನಿರ್ಮಾಣವನ್ನು ಕೂಡಲೇ ತೆರವುಗೊಳಿಸಬೇಕು. ಇಲ್ಲವಾದರೆ ಅಂತವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ಪ್ರತಿಭಾ ಆರ್. ಖಡಕ್ ಎಚ್ಚರಿಕೆ ನೀಡಿದರು.
ಸರ್ಕಾರಿ ಜಾಗ ಒತ್ತುವರಿ ಮಾಡಿ ನಿರ್ಮಾಣದಲ್ಲಿ ತೊಡಗಿರುವ ಬಗ್ಗೆ ಸಾರ್ವಜನಿಕರ ದೂರಿನಂತೆ ಗುರುವಾರ ಸ್ಥಳಕ್ಕೆ ತೆರಳಿದ ತಹಸೀಲ್ದಾರ್, ಸರ್ಕಾರಿ ಜಾಗದ ತೋಡು ಆಕ್ರಮಿಸಿ ಒತ್ತುವರಿ ಮಾಡಿ ನೈಸರ್ಗಿಕ ಹರಿವಿಗೆ ತಡೆ ಒಡ್ಡುತ್ತಿರುವುದು ಕಂದಾಯ ಇಲಾಖೆ ಗಮನಕ್ಕೆ ಬಂದಿದೆ. ಇದನ್ನು ಖಂಡಿತ ಸಹಿಸುವುದಿಲ್ಲ ಎಂದರು.
ಕಾಪು ಪರಿಸರದಲ್ಲಿ ಕಳೆದ ಬಾರಿ ಮಳೆಯಿಂದಾಗಿ ಅತಿ ಪ್ರವಾಹ ಉಂಟಾಗಿತ್ತು. ಹಲವು ತೋಡು ಮುಚ್ಚಿಹೋಗಿದ್ದರಿಂದ ಈ ರೀತಿಯ ಕೃತಕ ಜಲಪ್ರವಾಹ ಎದುರಿಸಬೇಕಾಗಿತ್ತು. ಈ ರೀತಿ ಈ ಬಾರಿ ಆಗದಂತೆ ಎಚ್ಚರ ವಹಿಸಲಾಗುತ್ತಿದೆ. ಹೀಗೆ ಸರ್ಕಾರಿ ತೋಡು ಆಕ್ರಮಿಸಿಕೊಂಡರೆ ಪ್ರಕೃತಿ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪಿಡಿಒ ರಜನಿಗೆ ಸರ್ಕಾರಿ ವ್ಯಾಪ್ತಿಯ ಜಾಗಗಳಲ್ಲಿ ಕಾಮಗಾರಿಗೆ ಯಾವುದೇ ಅನುಮತಿ ನೀಡದಿರುವಂತೆ ಸೂಚನೆ ನೀಡಿದರು. ಪಡುಬಿದ್ರಿ ಎಸ್‌ಐ ಪ್ರಸನ್ನ ಒತ್ತುವರಿ ಬಗ್ಗೆ ಮಾಹಿತಿ ನೀಡಿದರು. ಸ್ಥಳೀಯ ಮುಖಂಡರಾದ ಲೀಲಾದರ ಸಾಲ್ಯಾನ್, ಮೀನುಗಾರರ ಪರವಾಗಿ ಯತೀಶ್ ಸುವರ್ಣ, ಆಸೀಕ್, ಸುಶಾಂತ್ ಬಂಗೇರ, ಸಂತೋಷ್, ಕೃಷಿಕರ ಪರವಾಗಿ ಶಂಕರ ಪೂಜಾರಿ, ಚಂದ್ರಶೇಖರ್, ರಮೇಶ್ ಉಪಸ್ಥತರಿದ್ದರು.
ಎರ್ಮಾಳು ತೆಂಕ ಕರಾವಳಿ ಭಾಗ ಪ್ರವಾಸೋದ್ಯಮದ ಹೆಸರಿನಲ್ಲಿ ಅಭಿವೃದ್ಧಿಗೊಳ್ಳುತ್ತಿದೆ. ಸರ್ಕಾರದ ಯಾವುದೇ ಮಾರ್ಗಸೂಚಿ ಪಾಲಿಸದೆ ರೆಸಾರ್ಟ್ ಅವೈಜ್ಞಾನಿಕ ಕಾಮಗಾರಿ ನಡೆಯುತ್ತಿದೆ. ರೆಸಾರ್ಟ್ ಎದುರಿನ ಸರ್ಕಾರಿ ಭೂಮಿ ಅನಾಧಿಕಾಲದಿಂದಲೂ ನೀರು ಸಂಗ್ರಹಣ ಜಾಗವಾಗಿದೆ. ಅಲ್ಲದೆ ಮೀನುಗಾರಿಕೆಗೆ ಸಹಕಾರಿಯಾಗುವಂತೆ ನಾಡದೋಣಿ ನಿಲುಗಡೆ ಹಾಗೂ ಬಲೆ ಇಡಲಾಗುತ್ತೆ. ಈ ನೀರು ಶೇಖರಣೆ ಜಾಗ 15ರಿಂದ 20 ಕೃಷಿ ಭೂಮಿ ಹೆಚ್ಚುವರಿ ನೀರು ಸಂಗ್ರಹವಾಗುವ ಜಾಗವಾಗಿದ್ದು, ಇದರ ಅಗಲ 20 ಮೀಟರ್ ಆಗಿದ್ದು, ಆಳ ಕೃಷಿ ಗದ್ದೆ ಹಾಗೂ ತೋಟದ ಮಟ್ಟಕ್ಕಿಂತ ಕೆಳಮಟ್ಟದಲ್ಲಿತ್ತು. ಆದರೆ ಈಗ ಇದರ ಅಗಲ ಕೇವಲ 3 ಮೀಟರ್‌ಗಿಂತ ಕಡಿಮೆ ಮಾಡಿ ಆಳ ಕೃಷಿ ಭೂಮಿ ಮಟ್ಟಕ್ಕೆ ತಂದಿರುತ್ತಾರೆ, ಪರಿಣಾಮ ಹೆಚ್ಚುವರಿ ನೀರು, ಗದ್ದೆ ಹಾಗೂ ತೋಟಗಳಲ್ಲಿ ಶೇಖರಣೆಯಾಗಿ ಭತ್ತ, ತೆಂಗು ಹಾಗೂ ಇನ್ನಿತರ ಕೃಷಿ ಭೂಮಿ ಮಳೆಗಾಲದಲ್ಲಿ ನೀರು ಪಾಲಾಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದರು.