ಸಭೆಗೆ ಗೈರಾದ ಅಧಿಕಾರಿಗಳ ವಿರುದ್ಧ ಕ್ರಮ

FotoJet (1)
Published on

 ತಹಸೀಲ್ದಾರ್ ಶರತ್ ಕುಮಾರ್ ಹೇಳಿಕೆ | ಕೆಪಿಟಿಸಿಎಲ್ ಟವರ್ ಅಳವಡಿಕೆಗೂ ಮುನ್ನ ಪರಿಹಾರ ನೀಡಲಿ ಎಂದ ರೈತರು

ಮಾಗಡಿ : ರೈತ ಮುಖಂಡರ ಸಭೆಗೆ ಗೈರಾದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕೈಗೊಳ್ಳುವುದಾಗಿ ತಹಸೀಲ್ದಾರ್ ಶರತ್ ಕುಮಾರ್ ಎಚ್ಚರಿದರು.

ತಾಲೂಕು ಕಚೇರಿ ಸಭಾಂಗಣದಲ್ಲಿ ರೈತ ಮುಖಂಡರು ಹಾಗೂ ಅಧಿಕಾರಿಗಳೊಂದಿಗೆ ಮಂಗಳವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ರೈತರಿಗೆ ಅಧಿಕಾರಿಗಳು ಕಾನೂನು ಬದ್ಧವಾಗಿ ಕೆಲಸ ಮಾಡಿಕೊಡಿ, ನಿರ್ಲಕ್ಷ್ಯ, ಬೇಜವಾಬ್ದಾರಿ ತೋರಿದರೆ ಅಂತಹವರ ವಿರುದ್ಧ ಶಿಸ್ತುಕ್ರಮಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕು ರೈತಸಂಘದ ಅಧ್ಯಕ್ಷ ಲೋಕೇಶ್ ಮಾತನಾಡಿ, ತಿಪ್ಪಗೊಂಡನಹಳ್ಳಿ ಜಲಾಶಯದಿಂದ ಕುಣಿಗಲ್‌ನ ಜಾನ್ಸನ್‌ವರೆಗೆ 40 ವರ್ಷದ ಹಿಂದೆ ಯಾವುದೇ ಪರಿಹಾರ ನೀಡದೆ ರೈತರ ಜಮೀನಿನ ಮೇಲೆ ವಿದ್ಯುತ್ ಟವರ್ ನಿರ್ಮಿಸಿರುವುದರಿಂದ ಸಾವಿರಾರು ಎಕರೆ ಜಮೀನಿನಲ್ಲಿದ್ದ ತೆಂಗು, ಅಡಕೆ ಮರ ಹಾಳಾಗಿವೆ. ಇದರಿಂದ ಲಕ್ಷಾಂತರ ರೂ. ನಷ್ಟವಾಗಿದೆ. ಈಗ ರೈತರ ಜಮೀನುನಲ್ಲಿನ ಮರಗಳ ಕೊಂಬೆಗಳನ್ನು ಕಡಿಯುವಂತೆ ಮಾತ್ರ ನೋಟಿಸ್ ನೀಡುವುದು ಏಕೆ ಎಂದು ಪ್ರಶ್ನಿಸಿದರು.

ರೈತರ ಜಮೀನುಗಳಲ್ಲಿ ನಿರ್ಮಿಸಲಾದ ವಿದ್ಯುತ್ ಟವರ್‌ಗಳಿಗೆ ಪರಿಹಾರ ನೀಡದ ಕೆಪಿಟಿಸಿಎಲ್ ಮತ್ತೆ ಅದನ್ನು ತೆರವುಗೊಳಿಸಿ ಮತ್ತಷ್ಟು ಎತ್ತರದ ಟವರ್ ನಿರ್ಮಿಸಲು ಮುಂದಾಗಿದೆ. ಆದರೆ, ಸೂಕ್ತ ಪರಿಹಾರ ನೀಡುವುದಾಗಿ ಭರವಸೆ ನೀಡಿದರೆ ಮಾತ್ರ ರೈತರು ಒಪ್ಪಿಗೆ ನೀಡುವುದಾಗಿ ತಿಳಿಸಿದರು.

ಕೆಪಿಟಿಸಿಎಲ್ ಎಇಇ ನ್ಯಾಕ್ಸ್ ವಿಲ್ ಮಾತನಾಡಿ, 40 ವರ್ಷದ ಹಿಂದೆ ವಿದ್ಯುತ್ ಟವರ್ ನಿರ್ಮಿಸಿರುವುದರಿಂದ ಪರಿಹಾರ ನೀಡಲು ಸಾಧ್ಯವಿಲ್ಲ. ಈಗ ಮತ್ತೆ ಹಳೆಯ ಟವರ್ ತೆರವುಗೊಳಿಸಿ ಅದೇ ಸ್ಥಳದಲ್ಲಿ ಎತ್ತರದ ಟವರ್ ನಿರ್ಮಿಸುವ ವೇಳೆ ಪರಿಹಾರ ಕೊಡಲಾಗುವುದು ಎಂದರು. ತಲೂಕಿನ ಪ್ರತಿ ಗ್ರಾಮಗಳಲ್ಲಿ ನಿರ್ಮಿಸಿರುವ ಶುದ್ಧಕುಡಿಯುವ ನೀರಿನ ಘಟಕಗಳು ಹಾಳಾಗಿವೆ. ಅವುಗಳನ್ನು ಸರಿಪಡಿಸುವಂತೆ ತಾಪಂ ಇಒಗೆ ತಾಲೂಕು ರೈತ ಸಂಘದ ಅಧ್ಯಕ್ಷ ಲೋಕೇಶ್ ಮನವಿ ಮಾಡಿದರು.

ತಾಲೂಕಿನಾದ್ಯಂತ ಸುರಿದ ಅಕಾಲಿಕ ಮಳೆಗೆ ರಾಗಿ ಬೆಳೆ ಸಂಪೂರ್ಣ ನಷ್ಟ ಉಂಟಾಗಿದೆ. ಬಹುತೇಕ ರೈತರು ವಿಮೆ ಕಟ್ಟಿಲ್ಲ, ಈ ಸಂಬಂಧ ಸರ್ಕಾರರದಿಂದ ಸೂಕ್ತ ಪರಿಹಾರ ಕಲ್ಪಿಸಿಕೊಡಿ ಎಂದು ತಹಸೀಲ್ದಾರ್‌ಗೆ ರೈತ ಮುಖಂಡರು ಮನವಿ ಮಾಡಿದರು.

ಭರ್ಗಾವತಿ ಕೆರೆಗೆ ಪಟ್ಟಣದ ಕಲುಷಿತ ಸೇರುತ್ತಿದೆ. ಕಲುಷಿತ ತಡೆಗಟ್ಟಲು ಸಾಧ್ಯವಾಗದಿದ್ದರೆ ವೆಟ್‌ವೆಲ್ ಬಳಿ ಪ್ರತಿಭಟಿಸುವುದಾಗಿ ರೈತರು ಎಚ್ಚರಿಕೆ ನೀಡಿದರು.

ರೈತ ಮುಖಂಡ ಮಾಡಬಾಳ್ ಚಂದ್ರಾಯಪ್ಪ ಮಾತನಾಡಿ, ರಾಗಿ ಕಟಾವಿಗೆ ಕಟಾವು ಯಂತ್ರದವರು ಹೆಚ್ಚು ಹಣ ಪಡೆಯುತ್ತಾರೆ. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ ವೇಳೆ ಕಟಾವು ಯಂತ್ರ ಸೀಜ್ ಮಾಡಿ, ಬಳಿಕ ಬಿಟ್ಟು ಕಳಿಸಲಾಗುತ್ತಿದೆ ಎಂದು ಆರೋಪಿಸಿದರು.

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ನಿಧನ ಹಿನ್ನೆಲೆಯಲ್ಲಿ ಸಭೆಯಲ್ಲಿ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ತಾ.ಪಂ. ಇಒ ಜಯಪಾಲು, ಮುಖ್ಯಾಧಿಕಾರಿ ಶಿವರುದ್ರಯ್ಯ, ರೈತಮುಖಂಡರಾದ ರವಿಕುಮಾರು, ಶಿವಲಿಂಗಯ್ಯ, ಬುಡಾನ್ ಸಾಬ್, ಶಿವರುದ್ರಯ್ಯ, ನಾರಾಯಣಪ್ಪ, ಅಂಜಿನಪ್ಪ, ಕರಿಯಪ್ಪ, ಚಿಕ್ಕಣ್ಣ, ಬಾಚೇನಹಟ್ಟಿ ಮಹಂತೇಶ್ ಇತರರು ಇದ್ದರು.

ಅನುಕೂಲ ಕಲ್ಪಿಸಿ

ತಿಪ್ಪಗೊಂಡನಹಳ್ಳಿ ಜಲಾಶಯದಿಂದ ಮಂಚನಬೆಲೆ, ವೈಜಿಗುಡ್ಡ ಜಲಾಶಯಗಳಿಗೆ ಕಲುಷಿತ ಸೇರುತ್ತಿದೆ. ತಿಪ್ಪಗೊಂಡನಹಳ್ಳಿ ಜಲಾಶಯದಿಂದ ಬರುವ ಕಲುಷಿತ ತಡೆಯಬೇಕು. ಜಲಾಶಯದಲ್ಲಿ ಹೂಳು ಎತ್ತುವ ಹೆಸರಿನಲ್ಲಿ ನೂರಾರು ಕೋಟಿ ರೂ. ಅಕ್ರಮ ಎಸಗಲಾಗಿದೆ. ಈ ಬಗ್ಗೆ ತನಿಖೆ ನಡೆಸಲು ಕ್ರಮಕೈಗೊಳ್ಳುವಂತೆ ಜಲಾಶಯದ ಎಇಇ ರಾಮಕೃಷ್ಣೇಗೌಡಗೆ ರೈತ ಮುಖಂಡರು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net