ನಿರ್ಲಕ್ಷೃವಹಿಸಿದ್ದವರ ವಿರುದ್ಧ ಕ್ರಮ

ನಿರ್ಲಕ್ಷೃವಹಿಸಿದ್ದವರ ವಿರುದ್ಧ ಕ್ರಮ
Published on

ಸಾಲಿಗ್ರಾಮ: ಬೆಟ್ಟಳ್ಳಿ ಗ್ರಾಮದಲ್ಲಿ ನಡೆದಿರುವ ವಾಂತಿ ಬೇಧಿ ಸಾರ್ವಜನಿಕ ಅನಾರೋಗ್ಯಕ್ಕೆ ಸಂಬಂಧಿಸಿದಂತೆ ವರದಿ ಬಂದ ನಂತರ ನಿರ್ಲಕ್ಷೃ ವಹಿಸಿದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ಹೇಳಿದರು.

ಸಾಲಿಗ್ರಾಮ ತಾಲೂಕಿನ ಬೆಟ್ಟಳ್ಳಿ ಗ್ರಾಮಕ್ಕೆ ಶುಕ್ರವಾರ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿ ಮಾತನಾಡಿದರು.

ತಾಲೂಕು ಆರೋಗ್ಯ ಆಡಳಿತ ಅಧಿಕಾರಿ ನಟರಾಜ್ ಅವರೊಂದಿಗೆ ಸಾರ್ವಜನಿಕರ ಆರೋಗ್ಯದ ಸ್ಥಿತಿಗತಿ ಕುರಿತು ಸಂಪೂರ್ಣ ಮಾಹಿತಿ ತಿಳಿದುಕೊಳ್ಳಲಾಗಿದೆ.

ಮೈಸೂರು, ಸಾಲಿಗ್ರಾಮ, ಹಳ್ಳಿಮೈಸೂರು, ಹೊಳೆನರಸೀಪುರ, ಹಾಸನ, ಬೆಟ್ಟಳ್ಳಿ ತಾತ್ಕಾಲಿಕ ಚಿಕಿತ್ಸಾಲಯಗಳಲ್ಲಿ ಒಟ್ಟು 82 ಜನ ಚಿಕಿತ್ಸೆ ಪಡೆದಿದ್ದು, 78 ಜನ ಗುಣಮುಖರಾಗಿದ್ದಾರೆ. 4ರೋಗಿಗಳು ಸಾಲಿಗ್ರಾಮ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮದಲ್ಲಿ ವಾಂತಿ, ಬೇಧಿ ಭಯದ ವಾತಾವರಣ ಜನರಲ್ಲಿ ಕಡಿಮೆಯಾಗಿದೆ ಎಂದು ತಿಳಿಸಿದರು.

ಕಲುಷಿತ ನೀರಿನಿಂದ ಈ ಘಟನೆ ನಡೆದಿರಬಹುದು ಎಂಬ ಮಾಹಿತಿ ಕೇಳಿ ಬರುತ್ತಿರುವ ಹಿನ್ನೆಲೆ ಶಿಗೇವಾಳು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀಧರ್ ಅವರಿಂದ ಮಾಹಿತಿ ಪಡೆದು. ಗ್ರಾಮಕ್ಕೆ ನೀರು ಸರಬರಾಜು ಆಗುವ ಮುಖ್ಯ ಪಾಯಿಂಟ್ ಬಳಿ ತೆರಳಿ ಪರಿಶೀಲನೆ ನಡೆಸಿದರು.

ತಹಸೀಲ್ದಾರ್ ನರಗುಂದ, ತಾಲೂಕು ಆರೋಗ್ಯ ಆಡಳಿತ ಅಧಿಕಾರಿ ಡಾ. ನಟರಾಜ್, ಪಿಡಿಒ ಶ್ರೀಧರ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪವಿತ್ರಾ, ಆರೋಗ್ಯ ಇಲಾಖೆ ಹಿರಿಯ ಪರಿವೀಕ್ಷಕ ಮಹೇಶ್, ಕೆ.ವಿ. ರಮೇಶ್ ಹಾಗೂ ವಿವಿಧ ಇಲಾಖೆ ಅಧಿಕರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net