ಅಕ್ರಮ ಖಾತೆದಾರರ ವಿರುದ್ಧ ಕ್ರಮ

kathe
Published on

ಮಾಗಡಿ: ಸರ್ಕಾರಿ ಜಾಗ ಸ್ವಾಧಿನಕ್ಕೆ ಪಡೆದು ಆಕ್ರಮ ಬಾರ್​ ಖಾತೆಗಳನ್ನು ಮಾಡಿಸಿಕೊಂಡವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಶಾಸಕ ಎಚ್​.ಸಿ.ಬಾಲಕೃಷ್ಣ ಎಚ್ಚರಿಕೆ ನೀಡಿದರು.

ಪಟ್ಟಣದ ಸೋಮೇಶ್ವರ ದೇವಾಲಯದ ಆವರಣದಲ್ಲಿ ಸೋಮವಾರ ಪುರಸಭೆ ಹಮ್ಮಿಕೊಂಡಿದ್ದ್ದ ಎ ಮತ್ತು ಬಿ ಖಾತಾ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಆಕ್ರಮವಾಗಿ ಸರ್ಕಾರಿ ಸ್ವತ್ತುಗಳಲ್ಲಿ ಬಾರ್​ ನಂಬರ್​ ಕೊಟ್ಟು ಮನೆ ನಿರ್ಮಿಸಿಕೊಂಡು ಖಾತೆ ಮಾಡಿಸಿಕೊಂಡಿದ್ದರೆ ಅಂತಹವರ ವಿರುದ್ಧ ಸರ್ಕಾರ ಕಾನೂನು ಕ್ರಮಕೈಗೊಳ್ಳಲಿದೆ. ಅಕ್ರಮಕ್ಕೆ ಯಾರೂ ಸಹಕಾರ ನೀಡಬಾರದು. ಅದಕ್ಕೆ ಸಾರ್ವಜನಿಕರ ಸಹಕಾರ ಮುಖ್ಯ. ಕಾನೂನಾತ್ಮಕವಾಗಿ ಸ್ವತ್ತಿಗೆ ಹಕ್ಕುಗಳನ್ನು ಪಡೆಯಲು ಎ ಖಾತೆ ಮಾಡಿಕೊಡಲಾಗುತ್ತಿದೆ ಎಂದ ಬಾಲಕೃಷ್ಣ, ಪಟ್ಟಣವಾಸಿಗಳ್ಯಾರೂ ತೆರಿಗೆಯನ್ನು ಬಾಕಿ ಉಳಿಸಿಕೊಳ್ಳದೆ ಕಾಲಕಾಲಕ್ಕೆ ಪುರಸಭೆಗೆ ಜಮೆ ಮಾಡುವ ಮೂಲಕ ಪಟ್ಟಣದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಕಸದ ಬುಟ್ಟಿ ವಿತರಣೆ : ಪಟ್ಟಣದಲ್ಲಿ ಕಸವಿಲೇವಾರಿಯೇ ತಲೆನೋವಾಗಿದ್ದು, ಪುರ ಜನರು ಒಣ ಮತ್ತು ಹಸಿ ಕಸ ವಿಂಗಡಿಸದಿರುವುದು ಪುರನೌಕರರಿಗೆ ಕಷ್ಟವಾಗಿದೆ. ಹಾಗಾಗಿ ಪುರಸಭೆಯಿಂದ ಎಲ್ಲ ಮನೆಗಳಿಗೂ ಎರಡು ಪ್ಲಾಸ್ಟಿಕ್​ ಬಕೆಟ್​ಗಳ ವಿತರಣೆಗೆ ಸೂಚಿಸಲಾಗಿದೆ. ಎಲ್ಲರೂ ಹಸಿ, ಒಣ ಕಸ ವಿಂಗಡಿಸಿ, ಪುರಸಭೆಯ ಕಸದ ವಾಹನಕ್ಕೆ ನೀಡಬೇಕು. ರ್ನಿಲಸಿದರೆ ಕಸವನ್ನು ಅವರ ಮನೆಯ ಮುಂದೆಯೇ ಚೆಲ್ಲಿ, ಸೂಕ್ತ ಕ್ರಮಕೈಗೊಳ್ಳುವುದಾಗಿ ಶಾಸಕರು ಎಚ್ಚರಿಕೆ ನೀಡಿದರು.

ಶ್ರೀರಂಗ ಏತನೀರಾವರಿಗೆ ಚಾಲನೆ ಶ್ರೀ: ಮಹತ್ವಾಕಾಂೆಯ ಶ್ರೀರಂಗ ಏತನೀರಾವರಿ ಯೋಜನೆಗೆ ಆ.29ರಂದು ಡಿಸಿಎಂ ಡಿ.ಕೆ.ಶಿವಕುಮಾರ್​ ಅವರಿಂದ ಮೊದಲನೇ ಹಂತದ ಕಾಮಗಾರಿಗೆ ಚಾಲನೆ ನೀಡಲಾಗುವುದು. ನಾಡಪ್ರಭು ಕೆಂಪೇಗೌಡರ ಕೋಟೆ ಪುನರ್​ ನಿರ್ಮಾಣಕ್ಕೆ ಶಂಕುಸ್ಥಾಪನೆ, ಡೆಲ್ಟಾವತಿಯಿಂದ ಅಂಬೇಡ್ಕರ್​ ಭವನದಿಂದ ಕೆಂಪೇಗೌಡ ವೃತ್ತದವರೆಗೂ 4 ಕೋಟಿ ರೂ. ವೆಚ್ಚದಲ್ಲಿ ರಸ್ತೆ ನಿರ್ಮಾಣ, 36 ಲಕ್ಷ ರೂ. ವೆಚ್ಚದಲ್ಲಿ ಗಾಂಧಿವೃತ್ತದಲ್ಲಿ ಗಾಂಧಿ ಪ್ರತಿಮೆ ಹಾಗೂ 2 ಕೋಟ ರೂ. ವೆಚ್ಚದಲ್ಲಿ ವೃತ್ತ ನಿರ್ಮಿಸಲಾಗುವುದು. ತಾಲೂಕು ಕಚೇರಿಯನ್ನು ಗಾಂಧಿ ವೃತ್ತದ ಬಳಿ ನಿರ್ಮಿಸಿ ತಾಲೂಕು ಕಚೇರಿ ಜಾಗದಲ್ಲಿ 40 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್​ ಸರ್ಕಾರಿ ಆಸ್ಪತ್ರೆ ನಿರ್ಮಾಣಕ್ಕೆ ಆರೋಗ್ಯ ಸಚಿವ ದಿನೇಶ್​ ಗುಂಡುರಾವ್​ ಅವರಿಂದ ಆ.29ರಂದು ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಬಾಲಕೃಷ್ಣ ಹೇಳಿದರು.

ಖಾಲಿ ನಿವೇಶನಗಳ ಬಹಿರಂಗ ಹರಾಜು

ಪಟ್ಟಣದ ತಿರುಮಲೆ ಬಳಿಯ ಐಡಿಎಸ್​ಎಂಟಿ ಬಡಾವಣೆಯಲ್ಲಿ ಸುಮಾರು 205 ಖಾಲಿ ನಿವೇಶನಗಳಿದ್ದು, ಅವುಗಳನ್ನು ಬಹಿರಂಗ ಹರಾಜು ಮಾಡಲಾಗುವುದು. ಇದಕ್ಕೂ ಮೊದಲು 7.50 ಕೋಟಿ ರೂ. ವೆಚ್ಚದಲ್ಲಿ ಬಡಾವಣೆ ಅಭಿವೃದ್ಧಿ ಪಡಿಸಲು ತಿರ್ಮಾನಿಸಲಾಗಿದೆ. ಜತೆಗೆ ಈ ನಿವೇಶನಗಳಿಂದ ಬರುವ ಸುಮಾರು 50 ಕೋಟಿ ರೂ. ಅನುದಾನದಲ್ಲಿ ಹೈಟೆಕ್​ ತರಕಾರಿ ಮಾರುಕಟ್ಟೆ ನಿರ್ಮಿಸಲಾಗುವುದು. 5 ಕೋಟಿ ರೂ. ವೆಚ್ಚದಲ್ಲಿ ಉದ್ಯಾನವನ್ನು ಅಭಿವೃದ್ಧಿ ಪಡಿಸಿ, ಮೇಲ್ದರ್ಜೆಗೇರಿಸಲಾಗುವುದು. ಜತೆಗೆ 6 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್​ ಕ್ರೀಡಾಂಗಣ, 17 ಕೋಟಿ ರೂ.ನಲ್ಲಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಆಡಿಟೋರಿಯಂ ನಿರ್ಮಿಸಲಾಗುವುದು ಎಂದ ಬಾಲಕೃಷ್ಣ, ಬೈಚಾಪುರ ರಸ್ತೆ ವಿಸ್ತರಣೆಗೆ ಕ್ರಮಕೈಗೊಳ್ಳಲಾಗಿದ್ದು, ಹೇಮಾವತಿ ನೀರಿನ ಪೈಪ್​ಲೈನ್​ ಕಾಮಗಾರಿ ಪ್ರಗತಿಯಲ್ಲಿದೆ. ಅಲ್ಪಸಂಖ್ಯಾತರ ಅಭಿವೃದ್ಧಿಗೆ 20 ಕೋಟಿ ರೂ. ಹಾಗೂ ರಸ್ತೆ ಅಭಿವೃದ್ಧಿಗೆ 20 ಕೋಟಿ ರೂ. ನೀಡಲಾಗಿದೆ ಎಂದರು.

ನ.1ರವರೆಗೆ ಆಂದೋಲನ

ಮುಖ್ಯಾಧಿಕಾರಿ ಶ್ರೀನಿವಾಸ್​ ಮಾತನಾಡಿ, ನ.1ರವರೆಗೆ ಖಾತಾ ಆಂದೋಲನ ನಡೆಸಲಾಗುತ್ತಿದ್ದು, ಸಾರ್ವಜನಿಕರು ಅಗತ್ಯ ದಾಖಲೆ ನೀಡಿ ಖಾತೆ ಮಾಡಿಸಿಕೊಳ್ಳಬೇಕು ಎಂದರು. ಪುರಸಭೆ ಅಧಿಕಾರಿಗಳು ಖಾತಾ ವಿಚಾರವಾಗಿ ಸಮರ್ಪಕವಾಗಿ ಸ್ಪಂದಿಸದೆ ಉಡಾಫೆ ಉತ್ತರ ನೀಡುತ್ತಾರೆ. ಇದರಿಂದ ಸಾಕಷ್ಟು ನೊಂದಿದ್ದೇವೆ ಎಂದು ಅಧಿಕಾರಿಗಳ ವಿರುದ್ಧ ಶಾಸಕರಿಗೆ ಕೆಲವರು ದೂರು ನೀಡಿದರು. ಈ ಸಂಬಂಧ ಖಾತಾ ಆಂದೋಲನ ಮುಗಿದ ಒಂದು ವಾರದೊಳಗೆ ಜನಸ್ಪಂದನ ಸಭೆ ಹಮ್ಮಿಕೊಂಡು, ಸಮಸ್ಯೆಗಳನ್ನು ಇತ್ಯರ್ಥಪಡಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net