ಆಸ್ಪತ್ರೆ ಹಣ ಜಮೆ ವಿಳಂಬ, ದುರ್ಬಳಕೆಯಾದಲ್ಲಿ ಕ್ರಮ: ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್ ಎಚ್ಚರಿಕೆ

Health department
Published on

ಬೆಂಗಳೂರು: ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಆರೋಗ್ಯ ರಕ್ಷಾ ಸಮಿತಿ (ಯಸರ್ಸ್ ಚಾರ್ಜ್) ಹಣವನ್ನು ಪ್ರತಿದಿನ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು. ಹಣ ಜಮಾ ಮಾಡುವುದು ವಿಳಂಬವಾದಲ್ಲಿ ಅಥವಾ ದುರುಪಯೋಗ ಮಾಡಿಕೊಂಡಲ್ಲಿ ಕಾನೂನಿನ ಅಡಿ ಕ್ರಮ ಜರುಗಿಸಲಾಗುವುದು ಎಂದು ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.

ಈ ಕುರಿತು ಇಲಾಖೆ ಆಯುಕ್ತ ಡಿ. ರಂದೀಪ್ ಸುತ್ತೋಲೆ ಹೊರಡಿಸಿದ್ದು, ತುಮಕೂರು ಜಿಲ್ಲಾ ಆಸ್ಪತ್ರೆ ಆರೋಗ್ಯ ರಕ್ಷಾ ಸಮಿತಿಯ ಹಣ ದುರುಪಯೋಗದಿಂದಾಗಿ ಈ ಕ್ರಮ ಕೈಗೊಳ್ಳಲಾಗಿದ್ದು, ಎಲ್ಲ್ಲ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಯಲ್ಲಿ ಹೊರರೋಗಿ ವಿಭಾಗದ ಚೀಟಿ ಹಂಚುವ ಕಾರ್ಯವನ್ನು ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿರುವ ಡಿಇಒಗಳಿಗೆ ವಹಿಸಲಾಗಿದೆ. ಅವರು ಇ-ಆಸ್ಪತ್ರೆಯಲ್ಲಿ ನಮೂದಾಗಿರುವ ಲೆಕ್ಕದ ಪ್ರಕಾರ ಹಣವನ್ನು ಮೇಲ್ವಿಚಾರಕ ಸಿಬ್ಬಂದಿ ಹಾಗೂ ಅಧಿಕಾರಿಗಳ ಗಮನಕ್ಕೆ ತಂದು, ನಿಗದಿತ ಸಮಯದೊಳಗೆ ಬ್ಯಾಂಕ್ ಖಾತೆಗೆ ಜಮೆ ಮಾಡಬೇಕು ಎಂದು ತಿಳಿಸಿದ್ದಾರೆ.

ಸಂಗ್ರಹಿಸಿದ ಹಣವನ್ನು ಯಾವುದೇ ಸಂದರ್ಭದಲ್ಲಿ ಅನಗತ್ಯ ವಿಳಂಬವಿಲ್ಲದೆ ಬ್ಯಾಂಕ್ ಖಾತೆಗೆ ಜಮೆ ಮಾಡಬೇಕು. ಈ ಪ್ರಕ್ರಿಯೆಯಲ್ಲಿ ವಿಳಂಬವಾದಲ್ಲಿ ಹಣ ದುರುಪಯೋಗವಾದಲ್ಲಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಶಸಚಿಕಿತ್ಸಕರು, ತಾಲೂಕು ಮಟ್ಟದಲ್ಲಿ ಆಡಳಿತ ವೈದ್ಯಾಧಿಕಾರಿಗಳು ಮತ್ತು ಆಡಳಿತ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ, ಅಧಿಕಾರಿ ವರ್ಗದವರು ನೇರವಾಗಿ ಹೊಣೆಯಾಗುತ್ತಾರೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net