

ವಿಜಯಪುರ: ಪ್ರೀತಿಯ ವಿಷಯದಲ್ಲಿ ಬುದ್ಧಿವಾದ ಹೇಳಲು ಹೋದ ವ್ಯಕ್ತಿಯನ್ನು ಕೊಲೆಗೈದ ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ ಲಕ್ಷ ರೂ. ದಂಡ ವಿಧಿಸಿ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗುರುವಾರ ತೀರ್ಪು ಪ್ರಕಟಿಸಿದೆ.
ತಾಳಿಕೋಟಿಯ ಜುಬೇರ ಮೈನುದ್ದೀನ್ ಮುಲ್ಲಾ ಶಿಕ್ಷೆಗೆ ಗುರಿಯಾಗಿದ್ದಾನೆ. 2019ರ ಮಾ.21 ರಂದು ಸುಮಯ್ಯ ಕಾಶೀಮಅಲಿ ಮನ್ಸೂರ ಎಂಬಾಕೆಯನ್ನು ಪ್ರೀತಿಸುತ್ತೇನೆಂದು ಜುಬೇರ ಹಿಂಬಾಲಿಸಿದ್ದನು. ಈ ವಿಷಯ ತಿಳಿದ ಫಯಾಜಹ್ಮದ್ ಲೋಣಿ ಅವರು ಜುಬೇರಗೆ ಬುದ್ಧಿವಾದ ಹೇಳಿದ್ದರು. ಇದರಿಂದ ಸಿಟ್ಟಾದ ಜುಬೇರ, ತಾಳಿಕೋಟಿಯ ಕತ್ರಿ ಬಜಾರದಲ್ಲಿರುವ ಮುತ್ತು ಅಲೇಗಾವಿ ಅವರ ಚಹಾ ಅಂಗಡಿಗೆ ಕರೆದೊಯ್ದು ಮಚ್ಚಿನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದ.
ನ್ಯಾಯಾಧೀಶ ಎಲ್.ಪಿ. ಸತೀಶ ಅವರು ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ಸರ್ಕಾರದ ಪರವಾಗಿ ವನಿತಾ ಎಸ್.ಇಟಗಿ ವಾದ ಮಂಡಿಸಿದ್ದರು.