

ಅಂಕೋಲಾ : ರಾಷ್ಟ್ರೀಯ ಹೆದ್ದಾರಿ 63ರಲ್ಲಿ ತಾಲೂಕಿನ ಕಂಚಿನಬಾಗಿಲ ಸಮೀಪದ ನವಗದ್ದೆಯಲ್ಲಿ ಆ್ಯಸಿಡ್ ತುಂಬಿದ ಟ್ಯಾಂಕರ್ ಪಲ್ಟಿಯಾಗಿ, ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಆಂಧ್ರ ಪ್ರದೇಶದಿಂದ ಗೋವಾ ಕಡೆಗೆ ತೆರಳುತ್ತಿದ್ದ ಸಲ್ಫ್ಯೂರಿಕ್ ಆ್ಯಸಿಡ್ ತುಂಬಿದ ಮಗುಚಿಬಿದ್ದ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದ್ದು, ಅದರಲ್ಲಿದ್ದ ಆ್ಯಸಿಡ್ ಗಟಾರಕ್ಕೆ ಸೇರಿದ ಘಟನೆ ಶುಕ್ರವಾರ ನಡೆದಿದೆ.
34 ಟನ್ ಆ್ಯಸಿಡ್ ತುಂಬಿಕೊಂಡಿದ್ದು, ಟ್ಯಾಂಕ್‌ನಿಂದ ಐದಾರು ಟನ್ ಆ್ಯಸಿಡ್ ಸೋರಿಕೆಯಾಗಿದೆ. ಮಗುಚಿರುವುದು ಗ್ಯಾಸ್ ಟ್ಯಾಂಕರ್ ಅದರಿಂದ ಗ್ಯಾಸ್ ಸೋರಿಕೆಯಾಗುತ್ತಿದೆ ಎಂದು ತಪ್ಪು ತಿಳಿದ ಅಕ್ಕಪಕ್ಕದ ಜನ ಆತಂಕಿತರಾಗಿದ್ದರು.
ವಿಷಯ ತಿಳಿದು ತಕ್ಷಣ ಪೊಲೀಸ್ ಇಲಾಖೆ ಹಾಗೂ ಅಗ್ನಿಶಾಮಕ ದಳದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಇದು ಗ್ಯಾಸ್ ಟ್ಯಾಂಕರ್ ಅಲ್ಲ. ಆ್ಯಸಿಡ್ ತುಂಬಿದ ಟ್ಯಾಂಕರ್. ಇದು ಸೋರಿಕೆಯಾದರೆ ಯಾವುದೇ ಅಪಾಯವಿಲ್ಲ ಎಂದು ಹೇಳಿದ ನಂತರ ಸ್ಥಳೀಯರು ನಿಟ್ಟುಸಿರು ಬಿಟ್ಟರು. ಘಟನೆಯಲ್ಲಿ ಟ್ಯಾಂಕರ್ ಚಾಲಕನಿಗೆ ಸಣ್ಣ ಪುಟ್ಟ ಗಾಯವಾಗಿದೆ. ಸ್ಥಳಕ್ಕೆ ತಹಸೀಲ್ದಾರ ಅನಂತ ಶಂಕರ, ಪಿಎಸ್ಐ ಉದ್ದಪ್ಪ ಧರೆಪ್ಪನವರ ಇತರೇ ಸಿಬ್ಬಂದಿ ಭೇಟಿ ನೀಡಿದ್ದರು.