

ತಿ.ನರಸೀಪುರ: ನದಿಗಳು ಹಾಗೂ ದೇವಾಲಯಗಳು ಸಂಗಮಗೊಳ್ಳುವ ತ್ರಿವೇಣಿ ಸಂಗಮದಂತಹ ಕ್ಷೇತ್ರದಲ್ಲಿ ಪುಣ್ಯಸ್ನಾನ ಮಾಡುವುದರಿಂದ ಮನಃಶಾಂತಿ ಮತ್ತು ಮಾನಸಿಕ ನೆಮ್ಮದಿ ವೃದ್ಧಿಯಾಗಲಿದೆ. ದೇವರುಗಳ ದರ್ಶನದಿಂದ ಜೀವನದ ಆತ್ಮಾವಲೋಕನವಾಗಲಿದೆ ಎಂದು ಕೆ.ಆರ್.ನಗರ ಕಾಗಿನೆಲೆ ಮಠದ ಶ್ರೀ ಶಿವನಂದಪುರಿ ಸ್ವಾಮೀಜಿ ಹೇಳಿದರು.
ತಿರುಮಕೂಡಲು ತ್ರಿವೇಣಿ ಸಂಗಮದಲ್ಲಿ ಕುಂಭಮೇಳ ಎರಡನೇ ದಿನವಾದ ಮಂಗಳವಾರ ಆಯೋಜಿಸಿದ್ದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಪುಣ್ಯ ಸ್ನಾನವೆಂದರೆ ಪಾಪಗಳನ್ನು ಕಳೆದುಕೊಳ್ಳುವುದಲ್ಲ. ಎಲ್ಲರೂ ಮನೆಯಲ್ಲಿ ಸ್ನಾನ ಮಾಡುವುದಕ್ಕೂ ನದಿಯಲ್ಲಿನ ಮಾಡುವುದಕ್ಕೂ ವ್ಯತ್ಯಾಸವಿದ್ದು, ಧಾರ್ಮಿಕ ಉತ್ಸವದಲ್ಲಿನ ಪುಣ್ಯಸ್ಥಾನಕ್ಕೆ ಹೆಚ್ಚಿನ ಮಹತ್ವವಿದೆ. ಕುಂಭಮೇಳದ ಪುಣ್ಯಸ್ನಾನ ಪ್ರತಿಯೊಬ್ಬರ ಅಂತರಂಗವನ್ನು ಶುದ್ಧಿಗೊಳಿಸಿ, ಮನಃಶಾಂತಿಯನ್ನು ನೀಡುತ್ತದೆ ಎಂದು ಬಣ್ಣಿಸಿದರು.
ಉತ್ತರ ಭಾರತದ ಪ್ರಯಾಗ್‌ರಾಜ್ ಮಾದರಿಯಲ್ಲಿಯೇ ದಕ್ಷಿಣ ಭಾರತದ ಜನತೆಗೆ ಕುಂಭಮೇಳದ ಉತ್ಸವವನ್ನು ಆಯೋಜಿಸಲು ಆದಿಚುಂಚನಗಿರಿ ಶ್ರೀಗಳು ಸೇರಿದಂತೆ ಸುತ್ತೂರು ಹಾಗೂ ತಿರುಚ್ಚಿ ಶ್ರೀಗಳು ಕಾವೇರಿ, ಕಪಿಲ ಹಾಗೂ ಸ್ಪಟಿಕ ಸರೋವರ ನದಿಗಳ ಸಂಗಮಗೊಳ್ಳುವ ತಿರುಮಕೂಡಲು ಕ್ಷೇತ್ರದಲ್ಲಿ ಶ್ರೀಕಾರವನ್ನು ಹಾಕಿರುವುದು ಈ ಭಾಗದ ಜನರ ಸೌಭಾಗ್ಯವೇ ಆಗಿದೆ. 1989ರಿಂದ 12 ಕುಂಭಮೇಳಗಳು ಲಕ್ಷಾಂತರ ಜನರ ಧಾರ್ಮಿಕ ಭಾವನೆಯನ್ನು ವೃದ್ಧಿಸಲು ಸಹಕಾರಿಯಾಗಿವೆ. ಈ ಬಾರಿಯ ಕುಂಭಮೇಳ ನಾಡಿಗೆ ಒಳಿತನ್ನ ಮಾಡಲೆಂದು ಗೀತೆಯೊಂದರ ಮೂಲಕ ಶುಭ ಹಾರೈಸಿದರು.
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಆಯೋಜಿಸಲಾಗಿದ್ದ ಧಾರ್ಮಿಕ ಸಭೆಯನ್ನು ಆದಿಚುಂಚನಗಿರಿ ಮಠಾಧೀಶ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟಿಸಿದರು. ಮೈಸೂರು ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ಕೊಡಗು ಬೆಟ್ಟದಪುರ ಮಠದ ಶ್ರೀ ಚನ್ನಬಸವ ದೇಶಕೇಂದ್ರ ಸ್ವಾಮೀಜಿ, ಅನ್ನದಾನೇಶ್ವರ ಸ್ವಾಮೀಜಿ, ಶ್ರೀ ದೊರೆಸ್ವಾಮಿ ಸ್ವಾಮೀಜಿ, ಮುಖಂಡ ತಿರುಮಕೂಡಲು ವೆಂಕಟೇಶ್ ಇತರರು ಇದ್ದರು.