ಶೈಕ್ಷಣಿಕ ಗುರಿ ಸಾಧನೆಗೆ ಕಠಿಣ ಪರಿಶ್ರಮ ಅಗತ್ಯ

31-KRP-04
Published on

ಕೆ.ಆರ್.ಪೇಟೆ: ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ವ್ಯಾಸಂಗ ಮಾಡಿ ಗುರಿ ಸಾಧನೆ ಮಾಡಬೇಕು. ಉತ್ತಮ ಗುಣ ಮತ್ತು ನಡವಳಿಕೆಗಳನ್ನು ಮೈಗೂಡಿಸಿಕೊಂಡು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಒಳ್ಳೆಯ ಹೆಸರು ಗಳಿಸಬೇಕು ಎಂದು ಶಾಸಕ ಎಚ್.ಟಿ.ಮಂಜು ಹೇಳಿದರು.


ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕ್ರೀಡೆ, ಸಾಂಸ್ಕೃತಿಕ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಪಿಯುಸಿ ವ್ಯಾಸಂಗ ವಿದ್ಯಾರ್ಥಿ ಜೀವನದ ನಿರ್ಣಾಯಕ ಘಟ್ಟವಾಗಿದೆ. ಪದವಿಪೂರ್ವ ಶಿಕ್ಷಣದ ನಂತರ ವಿದ್ಯಾರ್ಥಿಗಳು ತಾಂತ್ರಿಕ ಮತ್ತು ವೈದ್ಯಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಪಿಯುಸಿ ವ್ಯಾಸಂಗವು ದಾರಿಮಾರ್ಗವಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಏಕಾಗ್ರತೆಯಿಂದ ವ್ಯಾಸಂಗ ಮಾಡಿ ಮುಂಬರುವ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಮೂಲಕ ತಂದೆ, ತಾಯಿಗಳು ಹಾಗೂ ಗುರು- ಹಿರಿಯರಿಗೆ ಕೀರ್ತಿ ತರುವ ಜತೆಗೆ ಉತ್ತಮ ಸಾಧನೆ ಮಾಡಿ ಇತರರಿಗೆ ಮಾದರಿಯಾಗಬೇಕು ಎಂದು ಕರೆ ನೀಡಿದರು.


ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಚೆಲುವಯ್ಯ ಮಾತನಾಡಿ, ಸರ್ಕಾರಿ ಪದವಿ ಪೂರ್ವ ಕಾಲೇಜು, ಗುಣಮಟ್ಟದ ಶಿಕ್ಷಣ ಹಾಗೂ ಫಲಿತಾಂಶಕ್ಕೆ ಜಿಲ್ಲೆಯಲ್ಲಿಯೇ ಹೆಸರುವಾಸಿಯಾಗಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೇ ಹೆಚ್ಚಾಗಿ ವ್ಯಾಸಂಗ ಮಾಡುವ ಈ ಶಾಲೆಯಲ್ಲಿ ಪ್ರತಿಭಾವಂತರು ಹೆಚ್ಚಾಗಿದ್ದಾರೆ. ದ್ವಿತೀಯ ಪಿಯುಸಿ ಪರೀಕ್ಷೆಗಳು ಸಮೀಪಿಸುತ್ತಿರುವುದರಿಂದ ವಿದ್ಯಾರ್ಥಿಗಳು ಸಮಯವನ್ನು ವ್ಯರ್ಥ ಮಾಡದೆ ತಾವು ಶಾಲೆಯಲ್ಲಿ ಕಲಿತ ಪಾಠಗಳನ್ನು ಮತ್ತೆ ಜ್ಞಾಪಕ ಮಾಡಿಕೊಂಡು ಚೆನ್ನಾಗಿ ಓದುವ ಮೂಲಕ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಕೆ.ಮೋಹನ್, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ತೋಟಪ್ಪ ಶೆಟ್ಟಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಾ. ಎಸ್.ಕೃಷ್ಣಮೂರ್ತಿ, ಪುರಸಭೆ ಮಾಜಿ ಸದಸ್ಯ ಕೆ.ಎಸ್.ರಾಜೇಶ್, ತಾ.ಪಂ. ಮಾಜಿ ಸದಸ್ಯ ಎಚ್.ಎಸ್.ರಾಜು, ಶಾಲೆಯ ಭೂದಾನಿಗಳಾದ ವೆಂಕಟನಾರಾಯಣಶೆಟ್ಟಿ, ಉಪ ಪ್ರಾಂಶುಪಾಲ ರವಿ, ಉಪನ್ಯಾಸಕರಾದ ಚಂದ್ರಶೇಖರ್, ಆರ್.ಬಿ.ಪದ್ಮನಾಭ್, ರೇವಣ್ಣ, ಶಫಿ ಸೇರಿದಂತೆ ಪಾಲಕರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net