

ಕುಂದಾಪುರ: ಕಳೆದ ಮೂರು ವರ್ಷಗಳಿಂದ ಅನಾರೋಗ್ಯದಿಂದಾಗಿ ಶಾಲಾ ವಾತಾವರಣದಿಂದ ದೂರವಿದ್ದರೂ ಮನೆಯಲ್ಲಿದ್ದುಕೊಂಡೇ 8 ಮತ್ತು 9ನೇ ತರಗತಿಯಲ್ಲಿ ಉತ್ತಮ ಅಂಕದಿಂದ ಪಾಸಾಗಿ, ಎಸ್ಸೆಸ್ಸೆಲ್ಸಿಯಲ್ಲಿ ಮಲಗಿದ್ದಲ್ಲೇ ಓದಿ 580 ಅಂಕ ಪಡೆದಿರುವ ಶ್ರಾವ್ಯಾ, ಮೂರು ವರ್ಷಗಳ ಬಳಿಕ ಮತ್ತೆ ತರಗತಿಗೆ ಹಾಜರಾಗಿದ್ದಾಳೆ. ಅರ್ಥಾತ್, ಸೋಮವಾರ ಕಾಲೇಜು ಶೈಕ್ಷಣಿಕ ಪರ್ವಕ್ಕೆ ಪ್ರವೇಶಿಸಿದ್ದಾಳೆ.
ಮನೆಯಿಂದ ತಾಯಿಯೊಂದಿಗೆ ಬಂದ ಶ್ರಾವ್ಯಾ ಇತರ ಮಕ್ಕಳು ಹಾಗೂ ಶಿಕ್ಷಕರ ಜತೆ ಕಾಲೇಜು ಕಾರಿಡಾರ್ ಪ್ರವೇಶಿಸಿದಳು. ಪ್ರಾಂಶುಪಾಲ ನವೀನ್ ಶೆಟ್ಟಿ ಹಾಗೂ ಶಿಕ್ಷಕರು ಕಾರಿಡಾರಿಗೆ ಬಂದು ಶ್ರಾವ್ಯಾಳನ್ನು ತರಗತಿಗೆ ಕರೆದೊಯ್ದರು. ಗುಲಾಬಿ ಹೂವು ನೀಡಿ ಸ್ವಾಗತಿಸಿದರು.
ಸಹಪಾಠಿಗಳಿಗೆ ಶ್ರಾವ್ಯಾಳನ್ನು ಪರಿಚಯಿಸಿದ ಪ್ರಾಂಶುಪಾಲರು, ಅನಾರೋಗ್ಯದ ನಡುವೆಯೂ ಶ್ರಾವ್ಯಾ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅದ್ಭುತ ಸಾಧನೆ ಮಾಡಿದ್ದು, ಇನ್ನು ಮುಂದೆ ಶ್ರಾವ್ಯಾ ಜವಾಬ್ದಾರಿ ನಿಮ್ಮದು. ಶಿಕ್ಷಣ, ಪಾಠ ಪ್ರವಚನದಲ್ಲಿ ಶ್ರಾವ್ಯಾಗೆ ಸಹಕಾರ ನೀಡುವ ಜತೆ ಅವಳನ್ನು ಕಾಳಜಿಯಿಂದ ನೋಡಿಕೊಳ್ಳುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದರು.
ಶಿಕ್ಷಕರಾದ ಅಕ್ಷತಾ ಶೆಟ್ಟಿ, ಜಯಶೀಲಾ ಪೈ, ಶ್ರೀನವ್ಯಾ, ಅಕ್ಷತಾ, ರೂಪಾ, ಅರುಣ್ ಶ್ರಾವ್ಯಾಳನ್ನು ಪ್ರೀತಿಯಿಂದ ಬರಮಾಡಿಕೊಂಡರು. ಶ್ರಾವ್ಯಾಳಿಗೆ ತರಗತಿಯ ವಿದ್ಯಾರ್ಥಿಗಳಿಂದಲೂ ಭವ್ಯ ಸ್ವಾಗತ ದೊರೆಯಿತು. ಶ್ರಾವ್ಯಾ ಮಲಗಿಕೊಂಡೇ ಓದಿ ಎಸ್ಸೆಸ್ಸೆಲ್ಸಿ ಪಾಸಾದ ವಿಷಯ ತಿಳಿದು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅಭಿನಂದಿಸಿ ಪತ್ರ ಬರೆದು, ಶೈಕ್ಷಣಿಕೆ ಪ್ರಗತಿಗೆ ಸಹಕಾರ ನೀಡುವ ಭರವಸೆ ನೀಡಿದ್ದಾರೆ.
ಬಹಳ ದಿನಗಳ ಬಳಿಕ ಮತ್ತೆ ತರಗತಿಗೆ ಪ್ರವೇಶಿಸಿದ್ದು ತುಂಬಾ ಖುಷಿಕೊಟ್ಟಿದೆ. ನನಗೆ ಓದಲು ಅವಕಾಶ ನೀಡಿದ ಆರ್.ಎನ್.ಶೆಟ್ಟಿ ಕಾಲೇಜು ಪ್ರಾಂಶುಪಾಲರು, ತಂದೆ ತಾಯಿಗೂ, ನನ್ನ ಬೆನ್ನಿಗೆ ನಿಂತು ಧೈರ್ಯ ಹೇಳಿ ಎಲ್ಲ ರೀತಿಯ ಸಹಕಾರ ನೀಡಿದ ವಿಜಯವಾಣಿಗೂ ಋಣಿಯಾಗಿದ್ದು, ಓದಿ ಇಂಜಿನಿಯರ್ ಆಗುವ ಗುರಿ ಇರಿಸಿಕೊಂಡಿದ್ದೇನೆ. | ಶ್ರಾವ್ಯಾ ವಿದ್ಯಾರ್ಥಿನಿ ವಿಜ್ಞಾನ ವಿಭಾಗದ ಪ್ರವೇಶಕ್ಕಾಗಿ ಬಂದ ಶ್ರಾವ್ಯಾಳ ದೈಹಿಕ ಸ್ಥಿತಿ ನೋಡಿ ಆತಂಕದಿಂದ ನಿನ್ನ ಹತ್ರ ಆಗುತ್ತಾ ಎಂದು ಪ್ರಶ್ನಿಸಿದ್ದೆ. ನನಗೆ ಅವಕಾಶ ಕೊಡಿ ಸಾಧಿಸಿ ತೋರಿಸುತ್ತೇನೆ ಎನ್ನುವ ಅವಳ ಛಲ ಅವಕಾಶ ಕೊಡಲು ಪ್ರೇರಣೆಯಾಯಿತು. ಆರೋಗ್ಯ ಸರಿ ಇದ್ದರೂ ಓದುವುದಕ್ಕೆ ಹಿಂದೇಟು ಹಾಕುವವರ ನಡುವೆ ಅನಾರೋಗ್ಯದ ನಡುವೆಯೂ ಓದುವ ಛಲ ಮತ್ತು ಗುರಿ ಈಕೆಯಲ್ಲಿದ್ದು, ಸಾಧಿಸುತ್ತಾಳೆ ಎನ್ನುವ ಭರವಸೆ ಇದೆ. | ನವೀನ್ ಶೆಟ್ಟಿ ಪ್ರಾಂಶುಪಾಲ, ಆರ್.ಎನ್.ಶೆಟ್ಟಿ ಸಂಯುಕ್ತ ಪಿಯು ಕಾಲೇಜು, ಕುಂದಾಪುರ