ಕಡಬದಲ್ಲಿ ಗುರಿ ಮೀರಿ ಸಾಧನೆ

Kdb_Sanjeevini
Published on

ವಿಜಯವಾಣಿ ಸುದ್ದಿಜಾಲ ಕಡಬ

ಕಡಬ ತಾಲೂಕು ಕೇಂದ್ರವಾಗಿ ರಚನೆಯಾದ 5 ವರ್ಷಗಳಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನದಲ್ಲಿ ಕಡಬ ತಾಲೂಕು ಪ್ರತಿ ವರ್ಷ ಗುರಿ ಮೀರಿದ ಸಾಧನೆ ಮಾಡಿದ ಹೆಗ್ಗಳಿಕೆ ಪಡೆದುಕೊಂಡಿದೆ.

21 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಶಲ ಕಾರ್ಮಿಕರಿಗೆ ಕೆಲಸ ನೀಡುವುದರ ಜತೆಗೆ ಸಾರ್ವಜನಿಕ ಹಾಗೂ ವೈಯಕ್ತಿಕ ಅರ್ಹ ಫಲಾನುಭವಿಗಳಿಗೆ ದೀರ್ಘಕಾಲ ಬಾಳ್ವಿಕೆ ಬರುವ ಆಸ್ತಿಗಳನ್ನು ಸೃಜಿಸುವ ಮೂಲಕ ಗ್ರಾಮೀಣ ಜನತೆಗೆ ಆರ್ಥಿಕ ಸ್ವಾವಲಂಬನೆಯನ್ನು ನೀಡಿ ಯೋಜನೆ ಗ್ರಾಮೀಣ ಜನರ ಆಶಯಗಳನ್ನು ಈಡೇರಿಸಿದೆ.

2023-24ರಲ್ಲಿ ಕಡಬ ತಾಲೂಕಿಗೆ 2,16,204 ಮಾನವ ದಿನ ಸೃಜನೆಯ ಗುರಿ ನೀಡಲಾಗಿತ್ತು. 2024ರ ಮಾರ್ಚ್ ಅಂತ್ಯಕ್ಕೆ 2,24,309 ಮಾನವ ದಿನಗಳನ್ನು ಸೃಜಿಸುವ ಮೂಲಕ ಶೇ.104 ಗುರಿ ಮೀರಿದ ಸಾಧನೆ ಮಾಡಿದೆ. ಶೇ.55.83 ಮಹಿಳಾ ಭಾಗವಹಿಸುವಿಕೆ ಕಂಡಿದೆ.

ವೈಯಕ್ತಿಕ ಕಾಮಗಾರಿಗಳೇ ಹೆಚ್ಚು

ತಾಲೂಕಿನಲ್ಲಿ ವೈಯಕ್ತಿಕ ಫಲಾನುಭವಿಗಳಿಂದ ತೋಟಗಾರಿಕೆ ಕಾಮಗಾರಿಗಳಿಗೆ ಹೆಚ್ಚಿನ ಬೇಡಿಕೆಯಿದ್ದು, 939 ತೋಟಗಾರಿಕೆ ಕಾಮಗಾರಿಗಳು, 102 ಬಾವಿ ನಿರ್ಮಾಣ, 35 ಗೊಬ್ಬರದ ಗುಂಡಿ, 272 ವಸತಿ ಯೋಜನೆಯ ಮನೆಗಳಿಗೆ ಕೂಲಿ, 37 ಮನೆಗಳಿಗೆ ಶೌಚಗೃಹ ನಿರ್ಮಾಣ, 211 ದನದ ಹಟ್ಟಿ ನಿರ್ಮಾಣ, 9 ಕೃಷಿ ಹೊಂಡ, 17ಆಡು ಶೆಡ್, 7 ಹಂದಿ ಶೆಡ್, 25 ಕೋಳಿ ಶೆಡ್, 5 ಬಯೋ ಗ್ಯಾಸ್ ಘಟಕ, 126 ಬಚ್ಚಲು ಗುಂಡಿ ನಿರ್ಮಾಣ, 14 ತೋಟಕ್ಕೆ ಬಸಿಕಾಲುವೆ ನಿರ್ಮಾಣಗಳಿಗೆ ಆರ್ಥಿಕ ಸಹಕಾರವನ್ನು ನೀಡುವ ಮೂಲಕ ನರೇಗಾ ಯೋಜನೆ ಗ್ರಾಮೀಣ ಜನರಿಗೆ ತಲುಪಲು ಸಾಧ್ಯವಾಗಿದೆ.

ಸಮುದಾಯ ಕಾಮಗಾರಿಗಳು

36 ಕಾಂಕ್ರೀಟ್ ರಸ್ತೆ ನಿರ್ಮಾಣ, 6 ಶಾಲೆಗಳಿಗೆ ಆವರಣಗೋಡೆ, 1 ಅಂಗನವಾಡಿ, 1 ಗ್ರಾಪಂ ಕಟ್ಟಡ, 11 ಶಾಲೆಗಳಿಗೆ ಶಿಕ್ಷಣ ಇಲಾಖೆಯ ಅನುದಾನದ ಒಗ್ಗೂಡಿಸುವಿಕೆಯೊಂದಿಗೆ ಶೌಚಗೃಹ ನಿರ್ಮಾಣ, 1 ಶಾಲಾ ಬಿಸಿಯೂಟದ ಅಡುಗೆ ಕೋಣೆ, 6 ಕೊಳವೆ ಬಾವಿ ಜಲಮರುಪೂರಣೆ, 8 ಜನವಸತಿ ಪ್ರದೇಶಗಳಲ್ಲಿ ಸಮುದಾಯ ಬಚ್ಚಲುಗುಂಡಿ, 3 ಕೆರೆಗಳನ್ನು ಅಮೃತ ಸರೋವರ ಯೋಜನೆಯಡಿ ಒಗ್ಗೂಡಿಸುವಿಕೆಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಗೋಮಾಳ, ಗ್ರಾ.ಪಂ.ಮೀಸಲಿಟ್ಟ ಜಮೀನಿನಲ್ಲಿ ಗಿಡನೆಡುವುದು, ಮಳೆ ನೀರು ಶೇಖರಣೆಗೆ ಇಂಗುಗುಂಡಿ ನಿರ್ಮಾಣ, ಸಾರ್ವಜನಿಕ ಬಾವಿ ರಚನೆ, ಸಂಜೀವಿನಿ ಒಕ್ಕೂಟದವರಿಗಾಗಿ ಎನ್‌ಆರ್‌ಎಲ್‌ಎಂ ವರ್ಕ್ ಶೆಡ್ ನಿರ್ಮಾಣ, ಮಳೆ ನೀರು ಕೊಯ್ಲು, ಸ್ಮಶಾನ ಹಾಗೂ ಸಾಮಾಜಿಕ ಅರಣ್ಯ ಇಲಾಖೆಯಡಿ ರಸ್ತೆ ಬದಿ ನೆಡುತೋಪು ರಚಿಸಲಾಗಿದೆ.

ಎಲ್ಲ ಗ್ರಾಮ ಪಂಚಾಯಿತಿಗಳ ಮಂಡಳಿ, ಪಿಡಿಒ ಹಾಗೂ ಸಿಬ್ಬಂದಿ ವರ್ಗ ಮತ್ತು ತಾಲೂಕು ಪಂಚಾಯಿತಿ ನರೇಗಾ ಸಿಬ್ಬಂದಿಯ ಸಕ್ರಿಯ ಭಾಗವಹಿಸುವಿಕೆಯಿಂದ ಕಡಬ ತಾಲೂಕಿನ ಗ್ರಾಮೀಣ ಭಾಗದಲ್ಲಿ ಅತಿ ಹೆಚ್ಚು ಮಾನವ ದಿನಗಳನ್ನು ಸೃಜಿಸಿ 9.95 ಕೋಟಿ ರೂ ಖರ್ಚು ಭರಿಸಿ, ಗ್ರಾಮೀಣಾಭಿವೃದ್ಧಿಗೆ ಪೂರಕವಾದ ಹಲವು ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳನ್ನು ಅನುಷ್ಠಾನ ಮಾಡಲಾಗಿದೆ. ಕಳೆದ ಆಥಿಕ ವರ್ಷದಲ್ಲಿ ಸಂಘಟಿತ ಪ್ರಯತ್ನದಿಂದ ಗುರಿ ಮೀರಿದ ಸಾಧನೆ ಮಾಡಲು ಸಾಧ್ಯವಾಯಿತು. ಭವಾನಿ ಶಂಕರ್, ಕಾರ್ಯನಿರ್ವಾಹಕ ಅಧಿಕಾರಿ, ಕಡಬ ತಾ.ಪಂ.

ಭವಾನಿ ಶಂಕರ್, ಕಾರ್ಯನಿರ್ವಾಹಕ ಅಧಿಕಾರಿ, ಕಡಬ ತಾ.ಪಂ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net