

ಬಳ್ಳಾರಿ: ಹೆಣ್ಣುಮಕ್ಕಳಲ್ಲಿ ಆತ್ಮವಿಶ್ವಾಸ ಮತ್ತು ಸಬಲೀಕರಣದ ಛಲ ಹೆಚ್ಚಿಸಲು ಶಿಕ್ಷಣ ಅಗತ್ಯವಾಗಿದೆ ಎಂದು ಎಸ್ಪಿ ಡಾ.ವಿ.ಜೆ.ಶೋಭಾರಾಣಿ ಹೇಳಿದರು.
ಇದನ್ನೂ ಓದಿ:ಗಂಡುಮಕ್ಕಳ ಮೇಲೆ ಹೆಚ್ಚಿನ ದೌರ್ಜನ್ಯ
ನಗರದ ಬಿಡಿಎಎ ಸಭಾಂಗಣದಲ್ಲಿ ರೀಡ್ಸ್ ಸಂಸ್ಥೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಕ್ಕಳ ವಿಶೇಷ ಪೋಲಿಸ್ ಘಟಕ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸಹಯೋಗದಲ್ಲಿ ಬಾಲ್ಯವಿವಾಹ ನಿಷೇಧ, ಲಿಂಗ ತಾರತಮ್ಯ ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ತಡೆ ಕುರಿತು ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಹದಿಹರೆಯದ ಹೆಣ್ಣು ಮಕ್ಕಳ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೆಣ್ಣುಮಕ್ಕಳ ಆರೋಗ್ಯಕರ ಜೀವನಶೈಲಿ, ಶಿಕ್ಷಣ ಮತ್ತು ಪೋಷಣೆ ಬಗ್ಗೆ ಪಾಲಕರು ಕಾಳಜಿ ವಹಿಸಬೇಕು. ಗುರಿ ತಲುಪಲು ಸಹಕರಿಸಬೇಕು. ಶ್ರದ್ಧೆ ಮತ್ತು ನಿಷ್ಠೆಯ ವಿದ್ಯಾಭ್ಯಾಸದಿಂದ ಸಾಧನೆ ಮಾಡಬಹುದು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್.ಹೊಸಮನಿ ಮಾತನಾಡಿ, ವಿದ್ಯಾರ್ಥಿ ಜೀವನ ಅಮೂಲ್ಯವಾಗಿದೆ. ಸಮಯ ವ್ಯರ್ಥ ಮಾಡದೇ ಶ್ರದ್ಧೆಯಿಂದ ಓದಿ ಉತ್ತಮ ಸ್ಥಾನ ಪಡೆಯಬೇಕು. ಬಾಲ್ಯವಿವಾಹ ಮತ್ತು ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡಿ ಸುಂದರ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.
ವಿದ್ಯಾರ್ಥಿಗಳಿಗೆ ಬಾಲ್ಯವಿವಾಹದ ಕುರಿತು ಪ್ರತಿಜ್ಞಾವಿಧಿ ಬೋಧಿಸಲಾಯಿತು. ಬಾಲ್ಯವಿವಾಹ ನಿಷೇಧ, ಲಿಂಗ ತಾರತಮ್ಯ ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ತಡೆ ಕುರಿತು ನಗರದಲ್ಲಿ ಜಾಥಾ ನಡೆಸಲಾಯಿತು.