ಮನೆಯಲ್ಲಿ ಗಾಂಜಾ ಸಂಗ್ರಹಿಸಿದ್ದ ಆರೋಪಿ ಬಂಧನ

19 HANUR 5
Published on

ಹನೂರು: ತಾಲೂಕಿನ ಪೊನ್ನಾಚಿ ಸಮೀಪದ ಅಸ್ತೂರು ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಗಾಂಜಾ ಹಾಗೂ ನಾಡ ಬಂದೂಕನ್ನು ಹೊಂದಿದ್ದ ಆರೋಪಿಯನ್ನು ಸೋಮವಾರ ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಅಸ್ತೂರು ಗ್ರಾಮದ ವೆಂಕಟರಾಜು(47) ಬಂಧಿತ ಆರೋಪಿ. ಈತ ಮನೆಯಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಗಾಂಜಾವನ್ನು ಸಂಗ್ರಹಿಸಿದ್ದ. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಇನ್ಸ್‌ಪೆಕ್ಟರ್ ಜಗದೀಶ್ ಅವರು ಎಸ್ಪಿ ಡಾ.ಬಿ.ಟಿ ಕವಿತಾ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸಂಜೆ 6ರ ವೇಳೆಯಲ್ಲಿ ಮನೆಯ ಮೇಲೆ ದಾಳಿ ನಡೆಸಿ ಪರಿಶೀಲಿಸಿದಾಗ ಗಾಂಜಾದ ಜತೆ ಅಕ್ರಮವಾಗಿ ನಾಡ ಬಂದೂಕು ಹೊಂದಿರುವುದು ದೃಢಪಟ್ಟಿದೆ. 58 ಗ್ರಾಂ ಬೀಜ ಮಿಶ್ರಿತ ಒಣ ಗಾಂಜಾ ಹಾಗೂ ಒಂಟಿ ನಳಿಕೆಯ ನಾಡ ಬಂದೂಕನ್ನು ವಶಕ್ಕೆ ಪಡೆದ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದರು. ಈ ಸಂಬಂಧ ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಯಾಚರಣೆ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳಾದ ಶಿವಣ್ಣೇಗೌಡ, ಉಮೇಶ್, ಪೊಲೀಸ್ ಸಿಬ್ಬಂದಿ ಸಿದ್ದರಾಮಯ್ಯ, ನಂಜುಂಡಸ್ವಾಮಿ, ಹಾಗೂ ರಮೇಶ್ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net