ಕಾನ್‌ಸ್ಟೆಬಲ್ ಮೇಲೆ ಹಲ್ಲೆ; ಬೈಕ್ ಸವಾರನ ಸೆರೆ

Arrest
Published on

ಬೆಂಗಳೂರು: ಏಕಮುಖ ರಸ್ತೆಯಲ್ಲಿ ಬರುತ್ತಿದ್ದ ಬೈಕ್‌ನ್ನು ತಡೆದು ಪ್ರಶ್ನಿಸಿದ ಕಾನ್‌ಸ್ಟೆಬಲ್ ಮೇಲೆ ಹಲ್ಲೆ ನಡೆಸಿದ ಸವಾರನನ್ನು ಅಶೋಕನಗರ ಪೊಲೀಸರು ಬಂಧಿಸಿದ್ದಾರೆ.

ಉತ್ತರಹಳ್ಳಿ ಮುಖ್ಯ ರಸ್ತೆ ಗೌಡನಪಾಳ್ಯ ನಿವಾಸಿ ಕೆ. ಯಶ್ಚಿನ್ ಗೌಡ (26) ಬಂಧಿತ. ಏಪ್ರಿಲ್ 10ರ ಬೆಳಗ್ಗೆ ಅಶೋಕನಗರ ಸಂಚಾರ ಠಾಣೆ ಕಾನ್‌ಸ್ಟೆಬಲ್ ರಾಜೇಂದ್ರಕುಮಾರ್ ಎಂ. ಬಿರಾದರ್ ಮೇಲೆ ಹಲ್ಲೆ ನಡೆಸಿ ಸಮವಸ ಹಿಡಿದು ಎಳೆದಾಡಿದ್ದ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಬುದ್ಧಿ ಹೇಳಿದ್ದಕ್ಕೆ ಹಲ್ಲೆ

ಎಂ.ಜಿ. ರಸ್ತೆ ಸಮೀಪದ ಪ್ರೈಮ್ ರೋಜಾ ರಸ್ತೆಯಲ್ಲಿ ರಾಜೇಂದ್ರಕುಮಾರ್ ಸಂಚಾರ ನಿರ್ವಹಣೆ ಮಾಡುತ್ತಿದ್ದರು. ಬೈಕ್‌ನಲ್ಲಿ ಯಶ್ಚಿತ್ ಗೌಡ, ಏಕ ಮುಖ ಸಂಚಾರದ ವಿರುದ್ಧವಾಗಿ ಬರುತ್ತಿದ್ದನ್ನು ಗಮನಿಸಿ ತಡೆದು ನಿಲ್ಲಿಸಿ ಇದು ಏಕಮುಖ ರಸ್ತೆ ಎಂದು ಮನವರಿಕೆ ಮಾಡಿದ್ದಾರೆ.

ಅಷ್ಟಕ್ಕೆ ಕೂಗಾಡಿ ಪೊಲೀಸ್ ಸಮವಸ್ತ್ರ ಹಿಡಿದು ಎಳೆದಾಡಿ ಮುಖಕ್ಕೆ ಹಲ್ಲೆ ನಡೆಸಿ ಕೆಳಗೆ ಬೀಳಿಸಿ ಕಾಲಿನಲ್ಲಿ ಒದ್ದಿದ್ದಾನೆ. ತಕ್ಷಣ ಸ್ಥಳೀಯರ ಸಹಾಯದಿಂದ ಹಲ್ಲೆಗೆ ಒಳಗಾದ ಪೊಲೀಸ್, ಹೊಯ್ಸಳ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿಕೊಂಡು ಸವಾರರನ್ನು ಹಿಡಿದುಕೊಟ್ಟಿದ್ದಾರೆ.

ಆರೋಪಿ ನ್ಯಾಯಾಂಗ ಬಂಧನಕ್ಕೆ

ಆರೋಪಿ ಯಶ್ಚಿತ್, ಖಾಸಗಿ ಕಂಪನಿಯಲ್ಲಿ ನೌಕರನಾಗಿದ್ದಾನೆ. ಸವಾರನ ವಿರುದ್ಧ FIR ದಾಖಲಿಸಿ ಕೋರ್ಟ್‌ಗೆ ಆರೋಪಿಯನ್ನು ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net