

ಗುಂಡ್ಲುಪೇಟೆ: ತಾಲೂಕಿನ ಹೊಂಗಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ವಿಶ್ವ ಆನೆ ದಿನವನ್ನು ಆಚರಿಸಲಾಯಿತು.
ವನ್ಯಜೀವಿ ಛಾಯಾಗ್ರಾಹಕ ಆರ್.ಕೆ.ಮಧು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಪಂಚದಲ್ಲಿ ಆಫ್ರಿಕಾ ಆನೆ ಹಾಗೂ ಏಷ್ಯಾ ಆನೆಗಳೆಂಬ 2 ಬಗೆಗಳಿವೆ. ಆಫ್ರಿಕಾದಲ್ಲಿ ಆಫ್ರಿಕಾದ ಬುಶ್ ಆನೆ ಹಾಗೂ ಕಾಡಾನೆಗಳಿದ್ದು ಗಂಡು, ಹೆಣ್ಣುಗಳೆರಡೂ ದಂತವನ್ನು ಹೊಂದಿವೆ. ಏಷ್ಯಾದ ಆನೆಗಳಲ್ಲಿ ಕೇವಲ ಗಂಡಾನೆಗಳು ಮಾತ್ರ ದಂತಗಳನ್ನು ಹೊಂದಿವೆ. ಮಾನವನ ದುರಾಸೆ, ಪರಿಸರ ನಾಶ, ಕಾಡಿನಲ್ಲಿ ದೊಡ್ಡ ಯೋಜನೆಗಳು ಆನೆಗಳ ಆವಾಸ ಸ್ಥಾನವ ಕಬಳಿಸಿದ್ದರಿಂದ ಆನೆಗಳು ಗ್ರಾಮಗಳತ್ತ ದಾಳಿ ಮಾಡುತ್ತಿವೆ. ಇದರಿಂದ ಕಾಡಂಚಿನ ಗ್ರಾಮಗಳಲ್ಲಿ ಆನೆ ಮಾನವ ಸಂಘರ್ಷಕ್ಕೆ ಕಾರಣವಾಗುತ್ತಿವೆ ಎಂದು ಹೇಳಿದರು.
ಪ್ರಸ್ತುತ ವಿಶ್ವದಲ್ಲಿರುವ 4,50,000 ಆನೆಗಳಲ್ಲಿ ಏಷ್ಯಾ ಖಂಡದಲ್ಲಿ 50,000 ಇವೆ. ಇವುಗಳಲ್ಲಿ ಭಾರತದಲ್ಲಿ 30,000 ಆನೆಗಳಿದ್ದು ಬಂಡಿಪುರ ಒಂದರಲ್ಲಿಯೇ 1,160 ಆನೆಗಳಿವೆ. ಪರಿಸರ ಸಂರಕ್ಷಣೆಯಲ್ಲಿ ಆನೆ ಪ್ರಮುಖ ಕೊಂಡಿಯಾಗಿದೆ. ಇಂದು ಆನೆ ಕಾರಿಡಾರ್ ಕಡಿತಗೊಂಡಿದ್ದು ಆನೆಗಳು ಊರಿಗೆ ಲಗ್ಗೆ ಇಡುವ ಪ್ರಸಂಗ ಸಂಭವಿಸಿದೆ ಎಂದರು.
ಮುಖ್ಯ ಶಿಕ್ಷಕ ಮಹದೇಶ್ವರ ಸ್ವಾಮಿ, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.