ಕೊಳ್ಳೇಗಾಲ ನಗರಸಭೆಯಲ್ಲಿ ಖಾತೆ ಕೋಲಾಹಲ

4-KGL-1
Published on

ಕೊಳ್ಳೇಗಾಲ: ಪಟ್ಟಣದ ನಗರಸಭೆ ಕೌನ್ಸಿಲ್ ಸಭಾಂಗಣದಲ್ಲಿ ಶುಕ್ರವಾರ ನಗರಸಭಾಧ್ಯಕ್ಷೆ ರೇಖಾ ರಮೇಶ್ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಇ-ಸ್ವತ್ತಿನ ವಿಚಾರಕ್ಕೆ ನಗರಸಭೆ ನಡುವೆ ವಾಗ್ವಾದ ನಡೆದಿದ್ದು ಸದಸ್ಯರಿಗೆ ಶಾಸಕ ಎ.ಆರ್.ಕೃಷ್ಣಮೂರ್ತಿ ಕ್ಲಾಸ್ ತೆಗೆದುಕೊಂಡರು.

ಇ-ಸ್ವತ್ತಿಗೆ ಸಂಬಂಧಿಸಿದಂತೆ ದೂರುಗಳು ಸಾಕಷ್ಟಿದೆ. ಇಲ್ಲಿಯವರೆಗೆ ಬಂದ ಅರ್ಜಿಗಳೆಷ್ಟು, ಅದರಲ್ಲಿ ಎಷ್ಟು ವಿಲೇವಾರಿ ಮಾಡಿದ್ದೀರಿ, ಅಲ್ಲದೆ ಸದಸ್ಯರೆಷ್ಟು ಖಾತೆ ಮಾಡಿಸಿದ್ದಾರೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಮಾಹಿತಿ ಕೇಳಿದರು. ನಗರಸಭೆ ಕಂದಾಯ ನಿರೀಕ್ಷಕ ರಾಘವೇಂದ್ರ ಬಿ-ಖಾತೆಗೆ 1158, ಎ ಯಿಂದ ಬಿ ಖಾತೆಗೆ 464 ಅರ್ಜಿಗಳು ಬಂದಿವೆ. ಅದರಲ್ಲಿ 85 ಬಿ-ಖಾತೆ ಅರ್ಜಿ ಬಾಕಿ ಉಳಿದಿದೆ. ಎ ಯಿಂದ ಬಿ ಖಾತೆ ಅರ್ಜಿಗಳು ತಾಂತ್ರಿಕ ಸಮಸ್ಯೆಯಿಂದ ವಿಳಂಬವಾಗುತ್ತಿದೆ ಎಂದು ಮಾಹಿತಿ ನೀಡಿದರು.

ಈ ವೇಳೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಪ್ರತಿಕ್ರಿಯಿಸಿ, ಕೊಳ್ಳೇಗಾಲದಲ್ಲಿ ಇ-ಸ್ವತ್ತು ಬಗ್ಗೆ ಹೆಚ್ಚಿನ ದೂರು ನನ್ನ ಗಮನಕ್ಕೆ ಬಂದಿದೆ. ನಾನು ಹೇಳಿದಾಗ ಕೆಲಸವಾಗುತ್ತದೆ. ಮೊದಲು ಯಾಕೆ ಅರ್ಜಿಗಳು ಪೆಂಡಿಂಗ್ ಉಳಿಯುತ್ತದೆ ಎಂದು ಪ್ರಶ್ನಿಸಿದರು.

ಈ ನಡುವೆ ಎ.ಆರ್.ಕೃಷ್ಣಮೂರ್ತಿ ಅವರು ಮಧ್ಯ ಪ್ರವೇಶಿಸಿ, ಸಾಮಾಜಿಕ ಜಾಲತಾಣದಲ್ಲಿ ಉಪಾಧ್ಯಕ್ಷರೆ ಖಾತೆ ವಿಚಾರ ಕೂಗಾಡಿದ್ದಾರೆ ಎಂದರು. ಇದಕ್ಕೆ ನಗರಸಭೆ ಉಪಾಧ್ಯಕ್ಷ ಎ.ಪಿ.ಶಂಕರ್ ಪತ್ರಿಕ್ರಿಯಿಸಿ, ಅಧಿಕಾರಿಗಳು ಮಧ್ಯವರ್ತಿಗಳಿಗೆ ಸೀನಿಯಾರಿಟಿ ಉಲಂಘಿಸಿ ಖಾತೆ ಮಾಡಿಕೊಟ್ಟಿದ್ದಾರೆ. ಇಲ್ಲಿ ಸದಸ್ಯರಿಗೆ ಮಾಡಿಲ್ಲ. ವಾರ್ಡ್ ಮತದಾರರ ಕೆಲಸವನ್ನು ಮಾಡಲು ನಮ್ಮನ್ನು ಗೆಲ್ಲಿಸಿದ್ದಾರೆ ಎಂದು ಸಮಾಜಾಯಿಷಿ ನೀಡಿದರು. ಈ ಬಗ್ಗೆ ನಗರಸಭೆ ನಾಮನಿರ್ದೇಶಿತ ಸದಸ್ಯ ಅನ್ಸರ್ ಮಾತನಾಡಿ, ಸೀನಿಯಾರಿಟಿ ಬಿಟ್ಟು ಅರ್ಜಿ ವಿಲೇವಾರಿ ಮಾಡಬಹುದೆ ಇದರಲ್ಲಿ ಕೆಲವು ಸದಸ್ಯರು ಹಾಗೂ ಅಧಿಕಾರಿಗಳು ಶಾಮೀಲಾಗಿದ್ದಾರೆ. ಇದಕ್ಕೆ ನಾವು ಬೇಕಾದರೆ ದಾಖಲೆ ಸಮೇತ ದೂರು ನೀಡುತ್ತೇವೆ ಎಂದು ಡಿಸಿ ಅವರಿಗೆ ತಿಳಿಸಿದರು. ನಂತರ ಪೌರಾಯುಕ್ತ ರಮೇಶ್ ಮಾತನಾಡಿ, ಇಲ್ಲಿ ಇ-ಸ್ವತ್ತು ಸಮಸ್ಯೆಯೇ ಹೆಚ್ಚು ಬರುತ್ತಿದೆ. ನಮಗೆ ಬೇರೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಜತೆಗೆ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ ಅಳಲು ತೋಡಿಕೊಂಡರು.

ಉಪಾಧ್ಯಕ್ಷ ಸದಸ್ಯರೊಬ್ಬರ ನಡುವೆ ವಾಗ್ವಾದ:

ಸಭೆಯಲ್ಲಿ ಖಾತೆ ವಿಚಾರ ಚರ್ಚಿಸುವಾಗ ಹಿಂದೆ ಅನಧಿಕೃತ ಬಡಾವಣೆಗೂ ಎ-ಖಾತೆ ನೀಡಿದ್ದು ಅಧಿಕಾರಿಗಳ ಮೇಲೆ ಯಾವ ಕ್ರಮವಾಗಿದೆ ಎಂದು ಎ.ಪಿ ಶಂಕರ್ ಪ್ರಶ್ನಿಸಿದರು. ಈ ನಡುವೆ ಸದಸ್ಯ ಜಿ.ಪಿ ಶಿವಕುಮಾರ್ ಮಾತನಾಡಿ, ಖಾತೆ ಕೊಡಿಸಿರುವುದೇ ನಾವಲ್ಲವೇ ಉಪಾಧಕ್ಷರೆ, ನಾನು ಸದಸ್ಯನಾಗಿದ್ರು ಒಂದೇ ಒಂದು ಖಾತೆ ಮಾಡಿಸಿಲ್ಲ. ನೀವ್ಯಾಕೆ ಪದೇ ಪದೇ ಖಾತೆ ಎಂದು ಹೇಳಿ ಮಾರ್ಯಾದೆ ಕಳೆಯುತ್ತಿದ್ದೀರಿ, ಖಾತೆ ಮಾಡಿಸುವುದಕ್ಕೆ ನಾವು ಸದಸ್ಯರಾಗಿರುವುದು ಎಂದು ಅಕ್ರೋಶ ಹೊರ ಹಾಕುತ್ತಿದಂತೆ ಸಭೆಯಲ್ಲಿ ಗದ್ದಲ ಏರ್ಪಟಿತು. ಎ.ಪಿ ಶಂಕರ್ ನಾವೇನು ಅನಧಿಕೃತ ಲೇಔಟ್‌ಗಳಿಗೆ ಅಕ್ರಮ ಖಾತೆ ಮಾಡಿಸಿಲ್ಲ. ನಿಮ್ಮ ಖಾತೆ ಯಾರು ಮಾಡಿ ಸಿದರು ಅದನ್ನು ಹೇಳಿ ಎಂದು ಹೇಳಿದರು. ಬಳಿಕ ಸಭೆಯಲ್ಲಿದ್ದ ಸದಸ್ಯ ಶಾಂತರಾಜು, ಸುಮಾ ಸುಬ್ಬಣ್ಣ, ರಾಘವೇಂದ್ರ, ಮಂಜುನಾಥ್ ಅವರು ಜಿ.ಪಿ ಶಿವಕುಮಾರ್ ಅವರಿಗೆ ನೀವು ಎಲ್ಲ ಸದಸ್ಯರನ್ನು ಒಳಗೊಂಡತೆ ಮಾತನಾಡಬೇಡಿ ಎಂದು ತರಾಟೆಗೆ ತೆಗೆದುಕೊಂಡರು. ಈ ನಡುವೆ ಸ್ಥಾಯಿ ಸಮಿತಿ ಅಧಕ್ಷ ಸುರೇಶ್ ಹಾಗೂ ನಾಮ ನಿರ್ದೇಶಿತ ಸದಸ್ಯ ಸ್ವಾಮಿ ನಂಜಪ್ಪ ಪರಸ್ಪರ ಕೂಗಾಡಿದರು.

ಸದಸ್ಯರಿಗೆ, ಅಧಿಕಾರಿಗಳಿಗೆ ಶಾಸಕರ ಕ್ಲಾಸ್:

ಗಲಾಟೆ ಬಳಿಕ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಕಚೇರಿಯಲ್ಲಿ ವಿಶ್ವಾಸದಲ್ಲಿ ಸದಸ್ಯರು ಕೆಲಸ ಮಾಡಿ. ನೀವು ಮತ್ತೆ ಗೆಲ್ಲಬೇಕಲ್ಲವೇ, ಜನರ ಸಮಸ್ಯೆಯನ್ನು ಸದಸ್ಯರೆ ಬಗೆಹರಿಸಬೇಕು. ನೀವು ನೀವೆ ಕೂಗಾಡಬಾರದು. ಅಧಿಕಾರಿಗಳು ಹಾಗೂ ಸದಸ್ಯರು ಪರಸ್ಪರ ಗೌರವದಿಂದ ಕಾಣಬೇಕು. ನಗರಸಭೆ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇನೆ. ಅರ್ಥ ಮಾಡಿಕೊಳ್ಳಿ ಎಂದು ಕ್ಲಾಸ್ ತೆಗೆದುಕೊಂಡರು. ನಗರಸಭೆ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಉಳಿಯುತ್ತಿಲ್ಲ ಎಂಬ ದೂರಿದೆ ಶಾಸಕರು ತಿಳಿಸಿದರು. ಡಿಸಿ ಶಿಲ್ಪಾನಾಗ್ ಪ್ರತಿಕ್ರಿಯಿಸಿ, ಕೇಂದ್ರ ಸ್ಥಾನ ಬಿಡಲು ನನ್ನ ಅನುಮತಿ ಕೇಳಿದ್ದೀರಾ ಎಂದು ಖಾರವಾಗಿ ಪ್ರಶ್ನಿಸಿದರು.

ಪರಿಶೀಲಿಸಲು 1 ತಿಂಗಳ ಗಡುವು:

ಸಭೆಯಲ್ಲಿ ಯುಜಿಡಿ, ಶುದ್ಧ ಕುಡಿಯುವ ನೀರಿನ ಪ್ಲಾಂಟ್ ಸಮಸ್ಯೆಗಳ ಬಗ್ಗೆ ಚರ್ಚೆಯಾಯಿತು. ಅಲ್ಲದೆ, 24*7 ಕುಡಿಯುವ ನೀರಿನ ಬಾಕಿ ಉಳಿದ ಕಾಮಗಾರಿ, ಲೋಪಗಳ ಬಗ್ಗೆ ಸದಸ್ಯ ಧರಣೇಶ್ ಇನ್ನಿತರ ಸದಸ್ಯರು ದೂರಿದರು. ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ, ಸ್ಥಳದಲ್ಲಿದ್ದ ಜಿಲ್ಲಾ ನಗರಾಭಿವೃದ್ಧಿ ಕೋಶ ಇಇ ಅಲ್ತಫ್ ನೇತೃತ್ವದಲ್ಲಿ ತಂಡ ರಚಿಸಿ 1 ತಿಂಗಳೊಳಗೆ ಕಾಮಗಾರಿ ಸಂಬಂಧಿಸಿದ ಸಮಸ್ಯೆಗಳನ್ನು ಪರಿಶೀಲಿಸಿ ಕ್ರಮವಹಿಸಿ ಎಂದರು. 2025-26 ನೇ ಸಾಲಿಗೆ 15 ಹಣಕಾಸು ಯೋಜನೆಯಡಿ ಕೊಳ್ಳೇಗಾಲ ನಗರಸಭೆಗೆ ಹಂಚಿಕೆ ಯಾಗಿರುವ 3.95 ಕೋಟಿಗೆ ಸರ್ಕಾರದ ಸುತ್ತೋಲೆ ರೀತಿ ಕಾಮಗಾರಿ ಕ್ರೀಯಾಯೋಜನೆ ರೂಪಿಸಿ ಅನುಮೋದಿಸುವ ಬಗ್ಗೆ ಚರ್ಚೆಯಾಯಿತು.

ಅಧ್ಯಕ್ಷೆ ರೇಖಾ ರಮೇಶ್, ಜಿಲ್ಲಾ ನಗರಾಭಿವೃದ್ಧಿ ಇಲಾಖೆ ಅಲ್ತಫ್, ಉಪಾಧ್ಯಕ್ಷ ಎ.ಪಿ ಶಂಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ನಗರಸಭೆ ಸದಸ್ಯರು ಹಾಗು ನಗರಸಭೆ ನಾಮ ನಿರ್ದೇಶಿತ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net