

ಅರಕೇರಾ: ಚಟುವಟಿಕೆ ಆಧಾರಿತ ಸ್ಪರ್ಧೆಗಳು ಮಕ್ಕಳ ಆಂತರಿಕ ಕೌಶಲ ಗುರುತಿಸಲು ಸಹಕಾರಿ. ಪ್ರತಿಯೊಬ್ಬರೂ ಮುಕ್ತವಾಗಿ ಪಾಲ್ಗೊಳ್ಳಬೇಕು ಎಂದು ಪ್ರಾಚಾರ್ಯೆ ಬುದ್ದಿವಂತಿ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಪ್ರಥಮ ಪಿಯು ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಒಂದಲ್ಲ ಒಂದು ಚಟುವಟಿಕೆ ಮೇಲೆ ಆಸಕ್ತಿ ಇರುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಪ್ರಸ್ತುತ ಪಡಿಸಬಹುದು. ಪಠ್ಯ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಸಾಧನೆಗೆ ಕೌಶಲ ಸಹಕಾರಿಯಾಗುತ್ತದೆ ಎಂದರು.
ವಚನ, ಭಾವಗೀತೆ, ಭಕ್ತಿಗೀತೆ, ನಟನೆ, ನಾಟ್ಯ, ಮಿಮಿಕ್ರಿ, ಹಾಸ್ಯ, ಒಗಟು, ಗಾದೆ ಮಾತುಗಳು ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ಪ್ರದರ್ಶನ ಮಾಡಿದರು. ದ್ವಿತೀಯ ಪಿಯು ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ತಸ್ಲೀಮಾ ಮಹಿಬೂಬ, ದ್ವಿತೀಯ ಸ್ಥಾನ ಪಡೆದ ಹರ್ಷ ಬಸವರಾಜಗೆ ಸನ್ಮಾನಿಸಲಾಯಿತು.