

ಜಗಳೂರು: ನಿವೇಶನ ಮತ್ತಿತರ ಮೂಲಸೌಕರ್ಯಕ್ಕೆ ಒತ್ತಾಯಿಸಿ ಶುಕ್ರವಾರ ತಾಲೂಕು ಹಮಾಲರ ಸಂಘದ ಪದಾಧಿಕಾರಿಗಳು ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಅವರಿಗೆ ಮನವಿ ಸಲ್ಲಿಸಿದರು.
ಎಪಿಎಂಸಿಯಲ್ಲಿ ಸುಮಾರು 20 ವರ್ಷಗಳಿಂದಲೂ ಹಮಾಲರಾಗಿ ಕೆಲಸ ಮಾಡುತ್ತಿದ್ದೇವೆ. ಬಡತನದಲ್ಲೇ ಬದುಕುತ್ತಿದ್ದೇವೆ. ನಾವು ಅಂದಿನ ದುಡಿಮೆಯಿಂದ ಅಂದಿನ ಕುಟುಂಬ ನಡೆಸಬೇಕು.
ಆದ್ದರಿಂದ ನಮ್ಮ ಬದುಕಿಗೆ ಒಂದು ಸೂರು ನೀಡುವಂತೆ ಹಮಾಲರ ಸಂಘದ ಅಧ್ಯಕ್ಷ ಭೀಮಣ್ಣ ಮನವಿ ಮಾಡಿದರು.
ಹಮಾಲರು ತಾಲೂಕಿನ ಸುತ್ತಮುತ್ತಲಿನ ಹಳ್ಳಿಗಳಿಂದ ಕೆಲಸಕ್ಕೆ ಬರುವುದರಿಂದ ಬಸ್ ಜಾರ್ಜ್, ಊಟ, ಟೀ ಹೀಗೆ ನಿತ್ಯ ನೂರಾರು ರೂ. ಖರ್ಚಾಗುತ್ತದೆ.
ಪಟ್ಟಣದಲ್ಲಿ ಬಾಡಿಗೆ ಮನೆ ಮಾಡಿದರೆ ತಿಂಗಳಿಗೆ ಐದಾರು ಸಾವಿರ ರೂ. ಕೇಳುತ್ತಾರೆ. ಮಕ್ಕಳಿಗೆ ಶಾಲಾ, ಕಾಲೇಜು ಶುಲ್ಕ, ಆಸ್ಪತ್ರೆ ಹೀಗೆ ತಿಂಗಳಿಗೆ ಸಾವಿರಾರು ರೂ. ಬೇಕಾಗುತ್ತದೆ ಎಂದರು.
ಮನವಿ ಸ್ವೀಕರಿಸಿ ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಮಾತನಾಡಿ, ತಾಲೂಕಿನಲ್ಲಿರುವ ಹಮಾಲರ ಸಂಖ್ಯೆ, ಬೇಕಾಗುವ ಸೌಲಭ್ಯಗಳ ಸಂಪೂರ್ಣ ಮಾಹಿತಿ ಪಡೆದು ಸರ್ಕಾರದಿಂದ ಸಿಗುವ ನೆರವು ತಲುಪಿಸುವ ಪ್ರಯತ್ನ ಮಾಡುತ್ತೇನೆ.
ನಿವೇಶನದ ಬಗ್ಗೆ ಸಭೆ ಕರೆದು ಅಧಿಕಾರಿಗಳ ಜತೆ ಚರ್ಚಿಸಿ ನ್ಯಾಯ ಒದಗಿಸಿಕೊಡುತ್ತೇನೆ ಎಂದು ಭರವಸೆ ನೀಡಿದರು.
ತಹಸೀಲ್ದಾರ್ ಸಂತೋಷ್‌ಕುಮಾರ್, ಹಮಾಲರ ಸಂಘದ ಉಪಾಧ್ಯಕ್ಷ ಕೇಶವಣ್ಣ, ಪದಾಧಿಕಾರಿಗಳಾದ ಜಯ್ಯಪ್ಪ, ವೆಂಕಟೇಶ್, ಮಹೇಶ್, ಕೋಟೇಶ್, ಪರಶುರಾಮ, ತಿಪ್ಪೇಸ್ವಾಮಿ, ನೀಲಪ್ಪ, ಬಸವರಾಜ್, ತಿಪ್ಪೇಶಿ, ಮಂಜಪ್ಪ, ತಿಮ್ಮಪ್ಪ, ಪಾಲಪ್ಪ, ಗೋಣಪ್ಪ, ರುದ್ರಪ್ಪ, ಮಂಜುನಾಥ್ ಮತ್ತಿತರರಿದ್ದರು.