

ವಿಜಯವಾಣಿ ಸುದ್ದಿಜಾಲ ಕಲಬುರಗಿ
ರಾಷ್ಟಿಯ ಹೆದ್ದಾರಿಯಲ್ಲಿರುವ ಜೇವರ್ಗಿ ರಸ್ತೆಯಲ್ಲಿರುವ ಇಲ್ಲಿಗೆ ಸಮೀಪದ ಹಸನಾಪುರ ಬಳಿ ಬುಧವಾರ ರಾತ್ರಿ ಸಂಭವಿಸಿದ ಸರಣಿ ಅಪಘಾತದಲ್ಲಿ ಮಗು ಸೇರಿ ನಾಲ್ವರು ಮೃತಪಟ್ಟಿದ್ದಾರೆ.
ಮೌಲಾಬಿ ಎಂಬ ಮಹಿಳೆ ಹೆಸರಿನ ಗುರುತಿನ ಚೀಟಿಯೊಂದು ಸ್ಥಳದಲ್ಲಿ ಪತ್ತೆಯಾಗಿದ್ದರಿಂದ ಮೃತರಲ್ಲಿ ಅವರೊಬ್ಬರು ಇರಬಹುದು ಎಂದು ಪೊಲೀಸರು ನಂಬಿದ್ದಾರೆ. ಉಳಿದಂತೆ ಮೃತರ ಹೆಸರು, ವಿವರ ತಡರಾತ್ರಿಯವರೆಗೂ ಪತ್ತೆಯಾಗಿರಲಿಲ್ಲ. ಬೈಕ್ ಸವಾರ ಹಾಗೂ ಕಾರಿನಲ್ಲಿದ್ದ ಮೂವರು ಮೃತಪಟ್ಟಿದ್ದಾರೆ. ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಜೇವರ್ಗಿ-ಕಲಬುರಗಿ ಹೆದ್ದಾರಿಯಲ್ಲಿ ಹಸನಾಪುರ ಬಳಿಯಲ್ಲಿ ಬೈಕ್‌ನ್ನು ವೇಗವಾಗಿ ನಿರ್ಲಕ್ಷÈದಿಂದ ಚಲಾಯಿಸಿಕೊಂಡು ಲಾರಿಗೆ ಬೈಕ್ ಸವಾರ ಕಿನ್ನರ್ ಸೈಡಿನಲ್ಲಿ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಲಾರಿ ಅಡಿಗೆ ಸಿಲುಕಿ, ಸ್ವಲ್ಪ ದೂರ ಎಳೆದುಕೊಂಡು ಹೋಗಿದೆ. ಕೂಡಲೇ ಲಾರಿಯ ಚಾಲಕ ಬ್ರೇಕ್ ಹಾಕಿದಾಗ, ಹಿಂದೆ ವೇಗವಾಗಿ ಬರುತ್ತಿದ್ದ ಕಾರ್ ನಿಯಂತ್ರಣಕ್ಕೆ ಬಾರದೆ ಲಾರಿಗೆ ಹಿಂದಿನಿAದ ಡಿಕ್ಕಿ ಹೊಡೆದಿದೆ. ಹೀಗೆ ಸರಣಿಯಾಗಿ ಮೂರು ವಾಹನಗಳು ಒಂದೇ ಸ್ಥಳದಲ್ಲಿ ಅಪಘಾತಕ್ಕೀಡಾಗಿವೆ.
ಸರಣಿ ಅಪಘಾತದಿಂದ ಹೆದ್ದಾರಿಯಲ್ಲಿ ಸಂಚಾರ ಕೆಲಹೊತ್ತು ಸ್ಥಗಿತಗೊಂಡಿತ್ತು. ಇಬ್ಬರ ಶವ ಜೇವರ್ಗಿ ಆಸ್ಪತ್ರೆಗೆ ಸಾಗಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಇನ್ನಿಬ್ಬರು ಕಲಬುರಗಿ ಆಸ್ಪತ್ರೆಗೆ ಸಾಗಿಸುವಾಗ ಕೊನೆಯುಸಿರೆಳೆದಿದ್ದಾರೆ. ತಡರಾತ್ರಿ ಶವಗಳನ್ನು ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಶಿಫ್ಟ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ., ಡಿಸಿಪಿಗಳಾದ ಕನ್ನಿಕಾ ಸಿಕ್ರಿವಾಲ್, ಪ್ರವೀಣ ನಾಯಕ, ಸಂಚಾರ ಎಸಿಪಿ ಮಹ್ಮದ್ ಇಸ್ಲಾಯಿಲ್ ಶರೀಫ್, ಇನ್‌ಸ್ಪೆಕ್ಟರ್ ಮಹಾಂತೇಶ ಪಾಟೀಲ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಸಂಚಾರ ಠಾಣೆ-೧ರಲ್ಲಿ ಪ್ರಕರಣ ದಾಖಲಾಗಿದೆ.