ಹರೇಕಳದಲ್ಲಿ ಟಿಪ್ಪರ್ - ಸ್ಕೂಟರ್ ನಡುವೆ ಅಪಘಾತ: ಗಾಯಾಳು ಮೃತ್ಯು

web - ganesh
ಮೃತ ದುರ್ದೈವಿ ಗಣೇಶ್ ಆಚಾರ್ಯ.
Published on

ಉಳ್ಳಾಲ: ಮೂರು ದಿನಗಳ ಹಿಂದೆ ಹರೇಕಳದಲ್ಲಿ ಸಂಭವಿಸಿದ್ದ ಟಿಪ್ಪರ್ ಹಾಗೂ ಸ್ಕೂಟರ್ ನಡುವೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿದ್ದ ಸ್ಕೂಟರ್ ಸವಾರ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಸಾವನ್ನಪ್ಪಿದ್ದಾರೆ. ಪಾವೂರು ಗ್ರಾಮದ ಮಲಾರ್ ಅಕ್ಷರನಗರ ನಿವಾಸಿ ವಿಶ್ವನಾಥ್ ಆಚಾರ್ಯ ಎಂಬವರ ಪುತ್ರ ಗಣೇಶ್ ಆಚಾರ್ಯ(27) ಮೃತ ದುರ್ದೈವಿ.

ಹರೇಕಳ ಗ್ರಾ.ಪಂ.ಕಚೇರಿ ಬಳಿ ಅಪಘಾತ

ಗಣೇಶ್ ಆಚಾರ್ಯ ಜೂ.28ರಂದು ಬೆಳಗ್ಗೆ ಹರೇಕಳ ಮಾರ್ಗವಾಗಿ ಕೊಣಾಜೆಯತ್ತ ತೆರಳುತ್ತಿದ್ದರು. ಹರೇಕಳ ಗ್ರಾಮ ಪಂಚಾಯಿತಿ ಕಚೇರಿ ಸಮೀಪಕ್ಕೆ ತಲುಪಿದಾಗ ಅಪಘಾತ ಸಂಭವಿಸಿತ್ತು. ಹರೇಕಳದಿಂದ ಕೊಣಾಜೆಯತ್ತ ತೆರಳುತ್ತಿದ್ದ ಅತಿಯಾದ ವೇಗದಿಂದ ಬಂದ ಟಿಪ್ಪರ್ ಗಣೇಶ್ ಅವರು ಚಲಿಸುತ್ತಿದ್ದ ದ್ವಿಚಕ್ರ ವಾಹನವನ್ನು ಹಿಂದಿಕ್ಕುವ ಭರದಲ್ಲಿ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ.

ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯ

ಅಪಘಾತದ ತೀವ್ರತೆಗೆ ಸ್ಕೂಟರ್ ಮಗುಚಿಬಿದ್ದಿದ್ದು, ಗಣೇಶ್ ಅವರು ರಸ್ತೆಗೆಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ತಾಯಿ, ತಂದೆ, ಸಹೋದರ, ಸಹೋದರಿ ಇದ್ದಾರೆ. ಟಿಪ್ಪರ್ ಚಾಲಕ ಮಹಮ್ಮದ್ ಹನೀಫ್ ವಿರುದ್ಧ ಮಂಗಳೂರು ದಕ್ಷಿಣ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಫಲ ನೀಡದ ಪ್ರಯತ್ನ

ಗಣೇಶ್ ಅವರು ಮಂಗಳೂರಿನಲ್ಲಿ ಎ.ಸಿ.ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದರು. ಅಪಘಾತದಿಂದ ಗಾಯಗೊಂಡಿದ್ದ ಅವರ ಶಸ್ತ್ರಚಿಕಿತ್ಸೆಗೆ 10 ಲಕ್ಷ ರೂ. ಆವಶ್ಯಕತೆ ಇರುವುದಾಗಿ ಆಸ್ಪತ್ರೆಯಿಂದ ತಿಳಿಸಲಾಗಿತ್ತು. ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ್ದರಿಂದ ಮನೆಮಂದಿ ಇಷ್ಟೊಂದು ದೊಡ್ಡ ಮೊತ್ತ ಭರಿಸಲು ಅಸಾಧ್ಯ ಎನಿಸಿದ್ದರಿಂದ ಸ್ನೇಹಿತರು ಸಾಮಾಜಿಕ ಜಾಲತಾಣದ ಮೂಲಕ ದಾನಿಗಳ ಮೊರೆ ಹೋಗಿದ್ದರು. ಆದರೆ ಅದ್ಯಾವುದೂ ಫಲ ನೀಡಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net