

ಹಾವೇರಿ: ಲಾರಿ ಹಾಗೂ ಎರಡು ಕಾರುಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವಿಗೀಡಾಗಿದ್ದು, ಮೂವರ ಪರಿಸ್ಥಿತಿ ಗಂಭೀರವಾಗಿದ್ದು, ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.
ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಕಡೂರು ಕ್ರಾಸ್ ಬಳಿ ಈ ಭೀಕರ ಅಪಘಾತ ಸಂಭವಿಸಿದೆ. ಒಂದೇ ಕುಟುಂಬದವರು ಪ್ರಯಾಣಿಸುತ್ತಿದ್ದ ಎರಡು ಕಾರು ಹಾಗೂ ಒಂದು ಲಾರಿ ನಡುವೆ ಈ ಅಪಘಾತ ಸಂಭವಿಸಿದೆ. ಮೃತಪಟ್ಟಿರುವ ನಾಲ್ವರೂ ಒಂದೇ ಕುಟುಂಬದವರಾಗಿದ್ದು, ಒಬ್ಬಳು ಬಾಲಕಿ ಸೇರಿ ಇನ್ನು ಮೂವರ ಪರಿಸ್ಥಿತಿ ಚಿಂತಾಜನಕವಾಗಿದೆ.
ಮತ್ತಿಕಟ್ಟೆಯ ಶಂಕರೇಗೌಡ (32), ಶಿಕಾರಿಪುರ ತಾಲೂಕಿನ ಕರ್ನಳ್ಳಿಯ ಸದಾ (12), ಮಾಯತಮ್ಮನ ಮುಚಡಿಯ ಶಾಂತಾ (27), ಪೃಥ್ವಿ (17) ಸಾವಿಗೀಡಾದವರು. ಮಾಯತಮ್ಮನ ಮುಚಡಿಯ ಪ್ರೀತಂ, ಪವಿತ್ರಾ, ಕರ್ನಳ್ಳಿಯ ಎನ್. ಜ್ಯೋತಿ, ಪೂಜಾ, ಮತ್ತಿಕೋಟೆಯ ಕಲಾವತಿ ಹಾಗೂ ರಾಗಿಕೊಪ್ಪದ ಸಿ.ಕೆ.ಪ್ರೇಮಾ ಗಾಯಗೊಂಡಿದ್ದು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುಟುಂಬದವರು ಎರಡು ಕಾರುಗಳಲ್ಲಿ ಉಕ್ಕಡಗಾತ್ರಿ ದೇವರ ದರ್ಶನಕ್ಕೆ ಬಂದಿದ್ದು, ಇವರು ಶಿಕಾರಿಪುರ ತಾಲೂಕಿನ ಮತ್ತಿಕೋಟಿ ಗ್ರಾಮದವರು ಎಂದು ತಿಳಿದುಬಂದಿದೆ. ಅಪಘಾತ ಸಂಭವಿಸಿದ ಕೆಲವೇ ಕ್ಷಣಗಳಲ್ಲಿ ಕಾರಿನಲ್ಲಿ ಒದ್ದಾಡುತ್ತಿದ್ದವರನ್ನು ಸಾರ್ವಜನಿಕರು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ.
ರಟ್ಟಿಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ಸಂಭವಿಸಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವವರಿಗೆ ಚಿಕಿತ್ಸೆ ನೀಡಿ, ಉಳಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ.