

ಕಾರ್ಕಳ: ಸ್ಥಳೀಯ ಗ್ರಾಪಂ ಸ್ವಂತ ಅನುದಾನದಲ್ಲಿ ಗ್ರಾಮದ ಜನತೆಗೆ ಉಪಯೋಗವಾಗುವ ನಿಟ್ಟಿನಲ್ಲಿ ವಿವಿಧ ಸವಲತ್ತು ವಿತರಿಸುತ್ತಿರುವುದು ಶ್ಲಾಘನೀಯ. ಯೋಜನೆ ಜನರಿಗೆ ತಲುಪಿಸುವಲ್ಲಿ ಜನಪ್ರತಿನಿಧಿಗಳ ಪಾತ್ರ ಪ್ರಮುಖವಾಗಿದೆ. ಗ್ರಾಮದ ಏಳಿಗೆ ಜತೆಗೆ ಇಡೀ ನಾಡಿನ ಏಳಿಗೆ ಸಾಧ್ಯ ಎಂದು ಶಾಸಕ ವಿ.ಸುನೀಲ್ ಕುಮಾರ್ ಹೇಳಿದರು.
ಬಜಗೋಳಿ ಮುಡಾರು ಗ್ರಾಪಂ ಡಾ.ವಿ.ಎಸ್.ಆಚಾರ್ಯ ಸಭಾಭವನದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕಾರ ಹಾಗೂ ಸರ್ಕಾರದ ವಿವಿಧ ಸವಲತ್ತು ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಕಳ ತಹಸೀಲ್ದಾರ್ ಪ್ರದೀಪ್, ತಾಪಂ ಇಒ ಶಶಿಧರ ಕೆ.ಜಿ., ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆ ವಿಜಯ, ಮುಡಾರು ಗ್ರಾಪಂ ಅಧ್ಯಕ್ಷೆ ಶೃತಿ ಡಿ.ಅತಿಕಾರಿ, ನಲ್ಲೂರು ಗ್ರಾಪಂ ಅಧ್ಯಕ್ಷ ಅಶೋಕ್ ಪೂಜಾರಿ, ಮಾಳ ಗ್ರಾಪಂ ಅಧ್ಯಕ್ಷ ಉಮೇಶ್ ಪೂಜಾರಿ, ಈದು ಗ್ರಾಪಂ ಅಧ್ಯಕ್ಷ ಸದಾನಂದ ಪೂಜಾರಿ, ಮಿಯ್ಯರು ಗ್ರಾಪಂ ಅಧ್ಯಕ್ಷೆ ಸನ್ಮತಿ ನಾಯಕ್ ಹಾಗೂ ಸ್ಥಳೀಯ ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು. ಮುಡಾರು ಪಿಡಿಒ ರಮೇಶ್ ಎಸ್. ಕಾರ್ಯಕ್ರಮ ನಿರೂಪಿಸಿದರು.
ಮುಡಾರು ಗ್ರಾಪಂ ಸ್ವಂತ ಅನುದಾನದಲ್ಲಿ ಶಾಲೆಗಳಿಗೆ ಸಹಾಯಧನ, ಕ್ರೀಡೋಪಕರಣ, ಶೇ.25 ನಿಧಿಯಲ್ಲಿ ವೈದ್ಯಕೀಯ, ಶೈಕ್ಷಣಿಕ ಸಹಾಯಧನ, ಶಾಲಾ ಮಕ್ಕಳಿಗೆ ಸ್ಕೂಲ್ಬ್ಯಾಗ್ ವಿತರಣೆ, ಶೇ.5ರ ನಿಧಿಯಲ್ಲಿ ವೈದ್ಯಕೀಯ ಸಹಾಯಧನ ನೀಡಲಾಯಿತು. ರಾಜ್ಯ ಸರ್ಕಾರ ಕಾರ್ಮಿಕ ಇಲಾಖೆಯಿಂದ ಕಾರ್ಮಿಕ ಕಿಟ್ ವಿತರಿಸಲಾಯಿತು.
ಕೇಂದ್ರ ಸರ್ಕಾರ ವಿಶೇಷ ಯೋಜನೆಯಡಿ ವಿಕಲಚೇತನರಿಗೆ ಉಚಿತ ಸಾಧನ ಸಲಕರಣೆ ವಿತರಿಸಲಾಯಿತು. 33 ವರ್ಷಗಳ ಕಾಲ ಅಂಗನವಾಡಿ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸಿ ಸ್ವಯಂ ನಿವೃತ್ತಿ ಘೋಷಿಸಿದ ರಾಷ್ಟ್ರ ಪ್ರಶಸ್ತಿ ವಿಜೇತೆ ಕಾರ್ಯಕರ್ತೆ ಪದ್ಮಾವತಿ ಅಮೀನ್ ಅವರನ್ನು ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 6ನೇ ಸ್ಥಾನ ಪಡೆದ ಅವ್ನಿ ಪಿ.ಜೈನ್ ಅವರನ್ನು ಸನ್ಮಾನಿಸಲಾಯಿತು.