

ಕುಂದಾಪುರ: ತಾಲೂಕಿನ ಶ್ರೀಕ್ಷೇತ್ರ ಕಟ್ಬೇಲ್ತೂರು ಶ್ರೀ ಭದ್ರಮಹಾಕಾಳಿ ದೈವಸ್ಥಾನದಲ್ಲಿ ಶ್ರೀ ಭದ್ರಮಹಾಕಾಳಿ ದೇವಿ ದಾರುಬಿಂಬ ಪ್ರತಿಷ್ಠಾಪನೆ ಹಾಗೂ ಸಪರಿವಾರ ದೈವಗಳ ಪುನಃ ಪ್ರತಿಷ್ಠಾಪನೆ, ಬ್ರಹ್ಮಕುಂಭಾಭಿಷೇಕ ಮಹೋತ್ಸವ ಜ.22ರಿಂದ 24ರವರೆಗೆ ನಡೆಯಲಿದೆ ಎಂದು ದೈವಸ್ಥಾನ ಆಡಳಿತ ಸಮಿತಿ ಗೌರವಾಧ್ಯಕ್ಷ ಕೆ.ಗೋಪಾಲ ಪೂಜಾರಿ ಹೇಳಿದರು.
ಶ್ರೀಕ್ಷೇತ್ರದಲ್ಲಿ ಸ್ವರ್ಣಾರೂಢ ಪ್ರಶ್ನಾಚಿಂತನೆ ಮತ್ತು ಕ್ಷೇತ್ರದ ದೇವಿ ಅಪ್ಪಣೆ ಮೇರೆಗೆ ಶ್ರೀ ಭದ್ರಮಹಾಕಾಳಿ ದೇವಿ ರಕ್ತಚಂದನದ ನೂತನ ದಾರುಬಿಂಬ ಪ್ರತಿಷ್ಠಾಪಿಸಲಾಗುತ್ತಿದೆ. ಬ್ರಹ್ಮಶ್ರೀ ಕೆ.ಎಸ್.ಲಕ್ಷ್ಮೀನಾರಾಯಣ ಸೋಮಯಾಜಿ ಕಮ್ಮರಡಿ ನೇತೃತ್ವದಲ್ಲಿ ಧಾರ್ಮಿಕ ಅನುಷ್ಠಾನ ನಡೆಯಲಿದೆ. ಕೋಟೇಶ್ವರ ರಥಶಿಲ್ಪಿ ರಾಜಗೋಪಾಲ ಆಚಾರ್ಯ ನೂತನ ದಾರುಬಿಂಬ ಕೆತ್ತನೆ ಮಾಡಿದ್ದಾರೆ. ಆ.20ರಂದು ದೇವಿ ರಕ್ತಚಂದನದ ನೂತನ ದಾರು ಬಿಂಬದ ಶೋಭಾಯಾತ್ರೆ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರ ಕುಂಭಾಶಿಯಿಂದ ಹೆಮ್ಮಾಡಿ ತನಕ ವಾಹನ ಜಾಥಾ ಮೂಲಕ, ಹೆಮ್ಮಾಡಿಯಿಂದ ದೈವಸ್ಥಾನ ತನಕ ಕಾಲ್ನಡಿಗೆಯಲ್ಲಿ ಪುರಮೆರವಣಿಗೆ ನಡೆಯಲಿದೆ. 21ರಂದು ಹೊರೆಕಾಣಿಕೆ ಸಮರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
22ರಂದು ಗುರು ದೇವತಾ ಪ್ರಾರ್ಥನೆಯೊಂದಿಗೆ ಧಾರ್ಮಿಕ ವಿಧಿವಿಧಾನ ಪ್ರಾರಂಭಗೊಳ್ಳಲಿದೆ. 23ರಂದು ಶ್ರೀ ಭದ್ರಮಹಾಕಾಳಿ ಮೊದಲ್ಗೊಂಡು ಎಲ್ಲ 39 ಬಿಂಬಗಳಿಗೆ ಅಧಿವಾಸ ಪೂಜೆ, ಹೋಮ ಹವನ, ಸಂಜೆ ಕಲಶ ಪ್ರತಿಷ್ಠಾಪನೆ, ಬ್ರಹ್ಮಕುಂಭ ಪ್ರತಿಷ್ಠಾಪನೆ ನಡೆಯಲಿದೆ. 24ರಂದು ಬೆಳಗ್ಗೆ ಶ್ರೀ ಭದ್ರಮಹಾಕಾಳಿ ದೇವಿ ರಕ್ತಚಂದನದ ದಾರು ಬಿಂಬ ಪ್ರತಿಷ್ಠಾಪನೆ, ಜೀವಕುಂಭ ಅಭಿಷೇಕ, ಬ್ರಹ್ಮಕುಂಭಾಭಿಷೇಕ, ಅಮ್ಮನವರ ದರ್ಶನ, ಅನ್ನಸಂತರ್ಪಣೆ ಮೊದಲಾದ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ ಎಂದರು.
ಮಧ್ಯಾಹ್ನ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀಕ್ಷೇತ್ರ ಸುಬ್ರಹ್ಮಣ್ಯ ಸಂಪುಟ ನರಸಿಂಹ ಸ್ವಾಮಿ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದು, ಕೆ.ಎಸ್.ಲಕ್ಷ್ಮೀನಾರಾಯಣ ಸೋಮಯಾಜಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಧಾರ್ಮಿಕ ಮುಖಂಡ ಬಿ.ಅಪ್ಪಣ್ಣ ಹೆಗ್ಡೆ ಶುಭಾಶಂಸನೆಗೈಯಲಿದ್ದು, ಸಚಿವ ಮಂಕಾಳ ವೈದ್ಯ, ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಸಂಸದ ಜಯಪ್ರಕಾಶ ಹೆಗ್ಡೆ, ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್, ನಾಡೋಜ ಡಾ.ಜಿ.ಶಂಕರ ಮೊದಲಾದವರು ಪಾಲ್ಗೊಳ್ಳಲಿದ್ದಾರೆ.
ರಾತ್ರಿ 8ಕ್ಕೆ ಧಾರ್ಮಿಕ ಸಭೆ ಅಧ್ಯಕ್ಷತೆಯಲ್ಲಿ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ವಹಿಸಲಿದ್ದು, ಶಾಸಕರಾದ ಗುರುರಾಜ್ ಗಂಟಿಹೊಳೆ, ಗುರ್ಮೆ ಸುರೇಶ ಶೆಟ್ಟಿ, ಮಾಜಿ ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ, ಆನಂದ ಸಿ.ಕುಂದರ್, ಯು.ಬಿ.ಶೆಟ್ಟಿ ಉಪ್ಪುಂದ, ಉದಯ ಕುಮಾರ್ ಶೆಟ್ಟಿ ಕಾರ್ಕಳ, ಸಿ.ಸದಾಶಿವ ಶೆಟ್ಟಿ ಮೊದಲಾದವರು ಪಾಲ್ಗೊಳ್ಳಲಿದ್ದಾರೆ. 25ವರ್ಷ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಕೆ.ಆನಂದ ಶೆಟ್ಟಿ, ಮಹಾ ದಾನಿಗಳನ್ನು ಸಮಾರಂಭದಲ್ಲಿ ಗೌರವಿಸಲಾಗುವುದು ಎಂದರು.
ಆಡಳಿತ ಸಮಿತಿ ಉಪಾಧ್ಯಕ್ಷ ಬಿ.ಸೀತಾರಾಮ ಶೆಟ್ಟಿ, ಅಧ್ಯಕ್ಷ ಕೆ.ಆನಂದ ಶೆಟ್ಟಿ, ಮೊಕ್ತೇಸರ ಬಿ.ವಿಠಲ ಶೆಟ್ಟಿ, ಶ್ರೀಧರ ಶೆಟ್ಟಿ, ಮಂಜು ಶೆಟ್ಟಿ, ಶೇಖರ ಬಳೆಗಾರ್, ಕಾರ್ಯದರ್ಶಿ ಚಂದ್ರ ನಾಯ್ಕ ಉಪಸ್ಥಿತರಿದ್ದರು.