ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸಿ

19 vpt 4
Published on

ವಿರಾಜಪೇಟೆ: ಕ್ರೀಡೆಯಲ್ಲಿ ಸೋಲು ಗೆಲುವು ಸಮಾನ ರೀತಿಯಲ್ಲಿ ಕಾಣಬೇಕು ಎಂದು ಶಾಸಕ ಎ.ಎಸ್.ಪೊನ್ನಣ್ಣ ಸಲಹೆ ನೀಡಿದರು.

ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಕೊಡವ ಕ್ರಿಕೆಟ್ ಅಕಾಡೆಮಿ ವತಿಯಿಂದ ಭಾನುವಾರ ನಡೆದ 3ನೇ ವರ್ಷದ ಅಂತರ್ ಕೊಡವ ಸಮಾಜಗಳ ನಡುವಿನ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಲೆದರ್ ಬಾಲ್ ಕ್ರಿಕೆಟ್ ಕಲಿತು ಆಟವಾಡುವ ಪ್ರತಿಭೆ ಮುಂದೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸಲು ಸಂಸ್ಥೆಯು ಉತ್ತಮ ವೇದಿಕೆ ಕಲ್ಪಿಸಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕಣ್ಣಿಗೆ ಕಾಣದ ಹಲವು ಬಹುಮುಖ ಪ್ರತಿಭೆಗಳಿದ್ದರು. ಪ್ರತಿಭೆ ಅನಾವರಣ ಮಾಡಲು ಹಿನ್ನಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೊಡವ ಕ್ರಿಕೆಟ್ ಅಕಾಡೆಮಿಯು ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿರುವುದು ಶ್ಲಾಘನೀಯ. ಕ್ರೀಡೆಯ ಮೂಲಕ ಕೊಡವ ಸಮಾಜಗಳ ಮಧ್ಯೆ ಉತ್ತಮ ಬಾಂಧವ್ಯ ವೃದ್ಧಿಯಾಗಲಿ. ಕ್ರೀಡಾಕೂಟದಲ್ಲಿ ಭಾಗವಹಿಸುವ ಪ್ರತಿಯೊಬ್ಬ ಕ್ರೀಡಾ ಪಟುಗಳಿಗೆ ಒಳಿತಾಗಲಿ. ಕ್ರೀಡಾ ಪ್ರತಿಭೆಯನ್ನು ತೋರಿ ಸಾಧಕರಾಗಿ ಎಂದು ತಿಳಿಸಿದರು.

ಕೊಡವ ಕ್ರಿಕೆಟ್ ಅಕಾಡೆಮಿಯ ಅದ್ಯಕ್ಷರಾದ ಕೀತಿಯಂಡ ಕಾರ್ಸನ್ ಕಾರ್ಯಪ್ಪ ಮಾತನಾಡಿ, ಕೊಡವ ಜನಾಂಗದ ಗ್ರಾಮೀಣ ಮಟ್ಟದ ಕ್ರಿಕೆಟ್ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಸತತವಾಗಿ ಮೂರು ವರ್ಷಗಳಿಂದ ಲೆದರ್ ಬಾಲ್ ಕ್ರಿಕೆಟ್ ಆಯೋಜಿಸಲಾಗುತ್ತಿದೆ. ಜನಾಂಗದ ಪ್ರತಿಭೆಗಳು ಮುಂದೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯಲು ಇದು ಸಹಕಾರಿಯಾಗಲಿದೆ. ಸಂಸ್ಥೆಯು ದಶಕಗಳಿಂದ ಟೆನ್ನಿಸ್ ಬಾಲ್ ಕ್ರಿಕೆಟ್ ಆಯೋಜಿಕೊಂಡು ಬಂದಿದೆ. ಅದರೇ ಟೆನಿಸ್ ಬಾಲ್ ಕ್ರಿಕೆಟ್‌ನಲ್ಲಿ ಭವಿಷ್ಯ ಇಲ್ಲದಿರುವ ಚಿಂತನೆಯಿಂದ ಲೆದರ್ ಬಾಲ್ ಕ್ರಿಕೆಟ್ ಆಯೋಜಿಸಲಾಗಿದೆ ಎಂದರು.

ವಿರಾಜಪೇಟೆ ಕೊಡವ ಸಮಾಜದ ಅಧ್ಯಕ್ಷರಾದ ಅಮ್ಮಣಿಚಂಡ ರವಿ ಉತ್ತಪ್ಪ, ಚಿತ್ರನಟ ಕೂತಂಡ ತಾರಕ್ ಪೊನ್ನಪ್ಪ, ಕೊಡವ ಚಲನಚಿತ್ರ ನಟಿ ಕಾಣತಂಡ ಬೀನಾ ಜಗದೀಶ್ ಮಾತನಾಡಿದರು.

ಕ್ರೀಡಾಕೂಟದ ಪ್ರಥಮ ಪಂದ್ಯ ಕೊಡವ ಸಮಾಜ ನಾಪೋಕ್ಲು ಮತ್ತು ಕೊಡವ ಸಮಾಜ ವಿರಾಜಪೇಟೆ ಬಿ. ತಂಡಗಳ ಮಧ್ಯೆ ಪಂದ್ಯ ನಡೆಯಿತು.

ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚೆರಿಯಪಂಡ ಸುರೇಶ್ ಚೆಂಗಪ್ಪ, ಕೊಡವ ಕ್ರಿಕೆಟ್ ಅಕಾಡೆಮಿಯ ನಿರ್ದೇಶಕ ಚೆಕ್ಕೇರ ಚಂದ್ರ ಪ್ರಕಾಶ್, ಚೋಕಿರ ಅನಿತಾ ಕೊಕ್ಕೇಯಂಗಡ ರಂಜನ್, ಕೊಡವ ಕ್ರಿಕೆಟ್ ಅಕಾಡೆಮಿಯ ಪದಾಧಿಕಾರಿಗಳು ಮತ್ತು ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net