ಸೋಲನ್ನು ಗೆಲುವಿನ ಮೆಟ್ಟಿಲಾಗಿ ಸ್ವೀಕರಿಸಿ

ಸೋಲನ್ನು ಗೆಲುವಿನ ಮೆಟ್ಟಿಲಾಗಿ ಸ್ವೀಕರಿಸಿ
Published on

ಬನ್ನೂರು: ಯಾವುದೇ ಪಂದ್ಯದಲ್ಲೂ ಸೋಲು-ಗೆಲುವು ಇದ್ದೇ ಇರುತ್ತದೆ. ಸೋತವರು ಹತಾಶರಾಗದೆ ಸೋಲನ್ನೇ ಗೆಲುವಿನ ಮೆಟ್ಟಿಲಾಗಿ ಸ್ವೀಕರಿಸಿ ಸೋಲಿಗೆ ಕಾರಣವಾದ ಅಂಶಗಳನ್ನು ಮನನ ಮಾಡಿಕೊಂಡರೆ ಮುಂದೆ ಗೆಲುವಿನ ಹೆಜ್ಜೆಯನ್ನಿಡಬಹುದೆಂದು ವಕೀಲರಾದ ಬಿ. ಶಿವಮೂರ್ತಿ ಹೇಳಿದರು.

ಪಟ್ಟಣದ ಫುಟ್ಬಾಲ್ ಮೈದಾನದ ಆವರಣದಲ್ಲಿ ಧನುಷ್ ನೇತೃತ್ವದಲ್ಲಿ ಜೈಭೀಮ್ ಯುತ್ ಕ್ರಿಕೆಟರ್ಸ್‌ ವತಿಯಿಂದ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಜೈ ಭೀಮ್ ಪ್ರೀಮಿಯರ್ ಲೀಗ್-3 ಸುನೀಲ್‌ಬೋಸ್ ಟ್ರೋಫಿ ವಿತರಣೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

3 ವರ್ಷಗಳಿಂದ ನಡೆಯುತ್ತಿರುವ ಜೈ ಭೀಮ್ ಪ್ರೀಮಿಯರ್ ಲೀಗ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರಾಜ್ಯದ ನಾನಾ ಭಾಗಗಳಿಂದ ಇಲ್ಲಿಗೆ ಬಂದು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇಂತಹ ಸೌಹಾರ್ದಯುತ ಪಂದ್ಯಗಳು ಊರಿನ ಕೀರ್ತಿ ಹೆಚ್ಚಿಸಲಿ ಎಂದರು.

ಪುರಸಭೆಯ ಮಾಜಿ ಅಧ್ಯಕ್ಷ ಮುನಾವರ್ ಪಾಷ ಮಾತನಾಡಿ, ಇಂದು ಪಂದ್ಯಗಳೆಂದರೆ ಜಿದ್ದಾಜಿದ್ದಿನಿಂದ ಕೂಡಿರುತ್ತದೆ. ಆದರೆ, ಬನ್ನೂರಿನಲ್ಲಿ ನಡೆಸುವ ಯಾವುದೇ ಪಂದ್ಯಾವಳಿ ಕೂಡ ಸೌಮ್ಯಸ್ವರೂಪದಲ್ಲಿ ನಡೆಯುವುದು ಇಲ್ಲಿನ ಆಯೋಜಕರ ಕೊಡುಗೆಯಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಪಂದ್ಯಾವಳಿ ಮತ್ತಷ್ಟು ನಡೆಯಲಿ ಎಂದು ತಿಳಿಸಿದರು.

ಜೈಭೀಮ್ ಯೂತ್ ಕ್ರಿಕೆಟರ್ಸ್‌ ವತಿಯಿಂದ ಹಮ್ಮಿಕೊಳ್ಳಲಾದ ಜೈ ಭೀಮ್ ಪ್ರೀಮಿಯರ್ ಲೀಗ್-3ರ ಟ್ರೋಫಿಯನ್ನು ಮೈಸೂರಿನ ಫ್ರೆಂಡ್ಸ್ ಕ್ರಿಕೆಟರ್ಸ್‌ ಪಡೆದುಕೊಂಡರು. ದ್ವಿತೀಯ ಬಹುಮಾನ ಹಲಗೂರಿನ ಕ್ರಿಕೆಟರ್ಸ್‌ ಪಡೆದುಕೊಂಡರು. ಲಕ್ಕಿ ಸ್ಟಾರ್ ತಂಡ ತೃತೀಯ ಬಹುಮಾನ ಪಡೆದುಕೊಂಡಿತು.

ವಕೀಲ ಸಂಘದ ಖಜಾಂಚಿ ಮಹದೇವಸ್ವಾಮಿ, ಪುರಸಭೆಯ ನಾಮಿ ನಿರ್ದೇಶಿತ ಸದಸ್ಯ ಆರ್.ಶಿವಣ್ಣ, ಜಮರಾನ್, ದೊಡ್ಡಯಜಮಾನ ಜಯಮುತ್ತು, ಪ್ರತಾಪ್, ನಕುಲ್, ಸುಶಾಂತ್, ಧನುಷ್, ಶಾಂತ, ಗುಂಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net