

ಹಾಸನ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ಕಳೆದ ಎರಡು ದಿನಗಳಿಂದ ಚುರುಕು ಪಡೆದಿದ್ದು, ಶೇ.17ರಷ್ಟು ಪೂರ್ಣಗೊಂಡಿದೆ.
ಸೆ. 22ರಿಂದ ರಾಜ್ಯಾದ್ಯಂತ ಸಮೀಕ್ಷೆ ಪ್ರಾರಂಭಗೊಂಡಿತ್ತಾದರೂ ಸರ್ವರ್ ಇಲ್ಲದೆ ಸರ್ಕಾರ ಗೊತ್ತುಪಡಿಸಿದ ಆ್ಯಪ್ ತೆರೆದುಕೊಳ್ಳದೆ ಶಿಕ್ಷಕರು ರೋಸಿ ಹೋಗಿದ್ದರು. ಇದೇ ಪರಿಸ್ಥಿತಿ ಮುಂದುವರಿದರೆ ಅ. 7ರ ಗಡುವಿನೊಳಗೆ ಸಮೀಕ್ಷೆ ಪೂರ್ಣಗೊಳ್ಳುವುದು ಅನುಮಾನ ಎಂದು ಹೇಳಿದ್ದರು. ಆದರೆ ಶನಿವಾರ ಹಾಗೂ ಭಾನುವಾರ ಸರ್ವರ್ ಸಮಸ್ಯೆ ಬಗೆಹರಿದಿದ್ದು, ಕೆಲಸ ವೇಗ ಪಡೆದುಕೊಂಡಿದೆ. ಆ ಮೂಲಕ ಹಾಸನ ಜಿಲ್ಲೆಯಲ್ಲಿ ಇದುವರೆಗೆ 93,376 ಮನೆಗಳ ಸಮೀಕ್ಷೆ ಮುಕ್ತಾಯಗೊಂಡಿದ್ದು, ಶೇ. 17.66 ರಷ್ಟು ಪೂರ್ಣಗೊಳಿಸಲಾಗಿದೆ. ರಾಜ್ಯದಲ್ಲೇ ಸರ್ವೆ ಪಟ್ಟಿಯಲ್ಲಿ ಜಿಲ್ಲೆಗೆ 13ನೇ ಸ್ಥಾನದಲ್ಲಿದೆ.
ಜಿಲ್ಲಾದ್ಯಂತ 5,34,339 ಮನೆಗಳಿಗೆ ಗಣತಿದಾರರು ಭೇಟಿ ನೀಡಬೇಕಿದೆ. ಅದಕ್ಕಾಗಿ 4,897 ಶಿಕ್ಷಕರ ನಿಯೋಜನೆ ಮಾಡಲಾಗಿದೆ. ಸೆ. 28ರ ಮಧ್ಯಾಹ್ನ 3ರ ವೇಳೆಗೆ 93,376 ಮನೆಗಳ ಭೇಟಿ ಪೂರ್ಣಗೊಂಡಿದೆ. ಪ್ರತಿದಿನ 43 ಸಾವಿರ ಮನೆಗಳ ಸಮೀಕ್ಷೆ ಪೂರ್ಣಗೊಳಿಸುವ ಗುರಿಯನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಗಣತಿದಾರರಿಗೆ ನೀಡಿದೆ.
ಇಂದಿನಿಂದ ಮತ್ತೆ ಸಮಸ್ಯೆ ಸಾಧ್ಯತೆ: ಸರ್ವೆಗೆ ಆ್ಯಪ್ ಸಹಕರಿಸುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ನೆಟ್‌ವರ್ಕ್ ತೊಂದರೆ ವಿಪರೀತವಾಗುತ್ತಿದೆ ಎಂಬ ಕೂಗು ಕೇಳಿಬಂದ ಹಿನ್ನೆಲೆಯಲ್ಲಿ ಗಂಭೀರವಾಗಿ ಪರಿಗಣಿಸಿದ ಸರ್ಕಾರ ತಕ್ಷಣವೇ ತಾಂತ್ರಿಕ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಂಡಿತ್ತು. ಜತೆಗೆ ಶನಿವಾರ ಮತ್ತು ಭಾನುವಾರ ಸರ್ಕಾರಿ ರಜೆ ಇದ್ದುದರಿಂದ ಸರ್ಕಾರಿ ಕಚೇರಿಗಳಲ್ಲಿ ಸರ್ವರ್ ಬಳಕೆ ಕಡಿಮೆಯಿದ್ದುದರಿಂದ ಗಣತಿದಾರರಿಗೆ ಸಮಸ್ಯೆಯಾಗಿಲ್ಲ. ಸೋಮವಾರ ಸರ್ಕಾರಿ ಕಚೇರಿಗಳು ತೆರೆಯುವುದರಿಂದ ಮತ್ತೆ ಅದೇ ಸಮಸ್ಯೆ ತಲೆದೋರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.
ಆಲೂರು ತಾಲೂಕಿನಲ್ಲಿ 4343, ಅರಕಲಗೂಡು 10818, ಅರಸೀಕೆರೆ 144445, ಬೇಲೂರು 9486, ಚನ್ನರಾಯಪಟ್ಟಣ 11993, ಹಾಸನ 11870, ಹೊಳೆನರಸೀಪುರ 8691, ಸಕಲೇಶಪುರ ತಾಲೂಕಿನಲ್ಲಿ 5117 ಮನೆಗಳಿಗೆ ಗಣತಿದಾರರು ಭೇಟಿ ನೀಡಿದ್ದಾರೆ. ಈ ಕಾರ್ಯಕ್ಕೆ 4897 ಶಿಕ್ಷಕರ ಜತೆಗೆ 250 ಸಹಾಯಕರು, 100 ಮಾಸ್ಟರ್ ಟ್ರೈನರ್‌ಗಳು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಆಯಾ ಇಲಾಖೆ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಭಾನುವಾರ ರಜಾ ದಿನವೂ ಜಿಲ್ಲಾದ್ಯಂತ ಸಿಬ್ಬಂದಿ ಕರ್ತವ್ಯ ನಿರ್ವಹಿಸಿದ್ದಾರೆ.
ಗೃಹಜ್ಯೋತಿ ಕೈ ತಪ್ಪುವ ಭೀತಿ: ರಾಜ್ಯ ಸರ್ಕಾರದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ಗೃಹ ಜ್ಯೋತಿ ಬಳಕೆದಾರರ ಮೇಲೆ ಪರಿಣಾಮ ಬೀರಿದೆ. ಗಣತಿಗೆ ಸಹಾಯವಾಗಲೆಂದು ಸೆಸ್ಕ್ ಸಿಬ್ಬಂದಿಯನ್ನು ಮನೆ ಮನೆಗೆ ಸ್ಟಿಕ್ಕರ್ ಹಾಗು ಜಿಯೋ ಟ್ಯಾಗ್ ಅಳವಡಿಸುವ ಕಾರ್ಯಕ್ಕೆ ನಿಯೋಜಿಸಲಾಗಿತ್ತು. ಆ.23ರಿಂದ ಸ್ಟಿಕ್ಕರ್ ಅಂಟಿಸುವ ಕಾರ್ಯದಲ್ಲಿದ್ದ ಅವರು ಸಮಯಕ್ಕೆ ಸರಿಯಾಗಿ ವಿದ್ಯುತ್ ರೀಡಿಂಗ್ ಮಾಡದೆ 35 ರಿಂದ 40 ದಿನಗಳವರೆಗೆ ಮಾಡಿದ್ದಾರೆ. ಹೀಗಾಗಿ ಕೆಲವು ಮನೆಗಳಿಗೆ 200ಕ್ಕಿಂತ ಅಧಿಕ ಯೂನಿಟ್ ಖರ್ಚಾಗಿದೆ. ಮೊದಲೆಲ್ಲಾ 200 ಯೂನಿಟ್‌ಗಿಂತ ಕಡಿಮೆ ವಿದ್ಯುತ್ ಬಳಸಿದ್ದರೆ ಅಂತವರಿಗೆ ಬಿಲ್ ಬರುತ್ತಿರಲಿಲ್ಲ. ಆದರೆ ಈ ಬಾರಿ ಒಂದು ತಿಂಗಳಷ್ಟಲ್ಲೇ ಅಲ್ಲದೆ ಅಧಿಕ ಅವಧಿಯ ಬಿಲ್ ಬಂದಿರುವುದರಿಂದ ಬಳಕೆಯಾದ ಯೂನಿಟ್ ಪ್ರಮಾಣ ಹೆಚ್ಚಾಗಿದೆ. ಹಾಗಾಗಿ ಅಂತಹ ಕುಟುಂಬಸ್ಥರು ಈ ತಿಂಗಳು ಬಿಲ್ ಪಾವತಿಸುವುದು ಮಾತ್ರವಲ್ಲದೆ ಶಾಶ್ವತವಾಗಿ ಗೃಹಜ್ಯೋತಿ ಯೋಜನೆಯಿಂದ ದೂರ ಉಳಿಯುವ ಆತಂಕ ಎದುರಿಸುತ್ತಿದ್ದಾರೆ.