ಅನುದಾನಗಳ ಬಳಕೆಗೆ ವೇಗ ನೀಡಿ: ಡಾ.ಆನಂದ್ ಕರೆ

Sul_Pragathi
Published on

ಸುಳ್ಯ: ಸರ್ಕಾರದ ಯೋಜನೆಗಳಡಿ ಅನುದಾನ ಇದ್ದರೂ ಕೆಲವು ಗ್ರಾಪಂಗಳು ಅದನ್ನು ಬಳಕೆ ಮಾಡದೆ ಅಭಿವೃದ್ಧಿ ಕುಂಠಿತವಾಗಿರುವುದು ಸ್ಪಷ್ಟವಾಗಿದೆ. ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು ಈ ಬಗ್ಗೆ ಮೇಲುಸ್ತುವಾರಿ ವಹಿಸಿಕೊಂಡು ತಕ್ಷಣವೇ ಅನುದಾನ ಬಳಸಿ ಕಾಮಗಾರಿ ಪೂರ್ತಿಗೊಳ್ಳುವಂತೆ ಮಾಡಬೇಕು ಎಂದು ಜಿಪಂ ಸಿಇಒ ಡಾ.ಆನಂದ್ ಹೇಳಿದರು.

ತಾ.ಪಂನಲ್ಲಿ ಶುಕ್ರವಾರ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿ, ದಿನಗೂಲಿ ಸಂಖ್ಯೆ ಕಡಿಮೆ ಇರುವ ಅಜ್ಜಾವರ, ಬಾಳಿಲ, ಅಮರಮುಡ್ನೂರು, ಉಬರಡ್ಕ, ಅರಂತೋಡು, ಕಳಂಜ, ಸಂಪಾಜೆ, ಕೊಲ್ಲಮೊಗ್ರು ಗ್ರಾಮಗಳ ಪಿಡಿಒಗಳಲ್ಲಿ ಕಾರಣ ಕೇಳಿದರು. 15ನೇ ಹಣಕಾಸು ಯೋಜನೆ ಅನುದಾನ ಬಳಕೆ ಮಾಡದೇ ಇದ್ದು, ಯಾವ ಕಾರಣಕ್ಕೆ ಅನುದಾನ ಬಾಕಿ ಆಗಿದೆ? ತಕ್ಷಣವೇ ಕಾಮಗಾರಿ ಪೂರ್ಣಗೊಳಿಸತಕ್ಕದ್ದು. ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು ನಿಗಾ ಇರಿಸಬೇಕು ಎಂದು ಖಡಕ್ಕಾಗಿ ಸೂಚನೆ ನೀಡಿದರು.

ಗ್ರಾಪಂ ಜಲಜೀವನ್ ಮಿಷನ್ ಕಾಮಗಾರಿ ಕುರಿತು, ತೆರಿಗೆ ವಸೂಲಾತಿ ಪ್ರಗತಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಗೆ ಸಂಬಂಧಪಟ್ಟ ಇತರ ವಿಷಯಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.

ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ ಸಹಿತ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು. ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಸಿಡಿಪಿಒ, ಕೃಷಿ ಇಲಾಖಾಧಿಕಾರಿ, ಮೆಸ್ಕಾಂ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿದ್ದರು.

ಮನೆ ನಿರ್ಮಿಸಿ ಕೊಡಲು ಜಾಗ ಗುರುತಿಸಿ

ನಿವೇಶನರಹಿತರಿಗೆ ನಿವೇಶನ ಕಲ್ಪಿಸುವ ಸಲುವಾಗಿ ಗ್ರಾಮದಲ್ಲಿನ ಸರ್ಕಾರಿ ಜಮೀನು ಗುರುತಿಸುವ ಕೆಲಸ ಆಗಬೇಕು. ಆಯಾ ಪಂಚಾಯಿತಿಗಳು ತಮ್ಮ ವ್ಯಾಪ್ತಿಯಲ್ಲಿ ಜಾಗ ಗುರುತಿಸಿ ಬಳಿಕ ಸರ್ಕಾರದ ನಿಯಮಾವಳಿಗಳಂತೆ ನಿವೇಶನರಹಿತರಿಗೆ ಮನೆ ನಿರ್ಮಿಸಿ ಕೊಡುವ ಕೆಲಸ ಆಗಬೇಕು ಎಂದು ಆನಂದ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net