

ರಾಮನಗರ : ಜಿಲ್ಲೆಯ ಪಾಲಿಗೆ ಹೊಸ ವರ್ಷದ ಮೊದಲ ದಿನ ಕರಾಳ ದಿನವಾಗಿದ್ದು, ವಿವಿಧೆಡೆ ಸಂಭವಿಸಿದ ಅಪಘಾತದಲ್ಲಿ 6 ಮಂದಿ ಮೃತಪಟ್ಟು 11 ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ ಹೆಚ್ಚಿನ ಮಂದಿ ಹೊಸ ವರ್ಷದ ಪಾರ್ಟಿಗಾಗಿ ಹೊರ ಬಂದವರಾಗಿದ್ದು, ಇಬ್ಬರು ಮಾತ್ರ ಪಾದಚಾರಿಗಳಾಗಿದ್ದಾರೆ.
ಟ್ಯಾಂಕರ್‌ಗೆ ಕಾರು ಡಿಕ್ಕಿಯಾಗಿ ಅವಘಡ
ಮಂಗಳವಾರ ರಾತ್ರಿ 11.30ರಲ್ಲಿ ಕನಕಪುರದ ಸಾತನೂರಿನ ಬೆಂಗಳೂರು ವೃತ್ತದ ಬಳಿ ತೆರಳುತ್ತಿದ್ದ ಟ್ಯಾಂಕರ್‌ಗೆ ಕಾರು ಡಿಕ್ಕಿಯಾಗಿ ಇಬ್ಬರು ಮೃತಪಟ್ಟು, ಮತ್ತಿಬ್ಬರು ಸ್ಥಿತಿ ಗಂಭೀರವಾಗಿದೆ. ದಾವಣಗೆರೆಯ ನಿರಂಜನ್(47) ಹಾಗೂ ಮೈಸೂರು ಬೋಗಾದಿ ನಿವಾಸಿ ವಿಶ್ವನಾಥ್(48) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕಾರಿನ ಹಿಂಬದಿ ಸೀಟಿನಲ್ಲಿದ್ದ ವೀರೇಶ್(40), ಅಜಿತ್(24) ತೀವ್ರವಾಗಿ ಗಾಯಗೊಂಡಿದ್ದು, ಬೆಂಗಳೂರಿನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಕಾರಿನಲ್ಲಿದ್ದವರು ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು, ಮಂಗಳವಾರ ಮೈಸೂರಿನಿಂದ ವಾಪಸ್ ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಡಿವೈಎಸ್‌ಪಿ ಗಿರಿ, ಸರ್ಕಲ್ ಇನ್‌ಸ್ಪೆಕ್ಟರ್ ಕೆ.ಎಲ್.ಕೃಷ್ಣ, ಸಬ್‌ಇನ್ಸ್‌ಪೆಕ್ಟರ್ ಪ್ರದೀಪ್ ನೀಡಿ ಪರಿಶೀಲನೆ ನಡೆಸಿದರು. ಸಾತನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಪ್ಪಿದ ಅನಾಹುತ:
ಕನಕಪುರ ತಾಲೂಕಿನ ಸಾತನೂರಿನ ಸಂಗಮ ಬಳಿ ಭಾರಿ ಅನಾಹುತವೊಂದು ತಪ್ಪಿದೆ. ಬ್ರೇಕ್ ರಾಡ್ ತುಂಡಾಗಿ ಕೆಎಸ್‌ಆರ್‌ಟಿಸಿ ಬಸ್ ತಡೆಗೊಡೆಗೆ ಡಿಕ್ಕಿಯಾಗಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ. ಕನಕಪುರದಿಂದ ಸಂಗಮದ ಮಡಿವಾಳಕ್ಕೆ ಬಸ್ ಹೆಚ್ಚಿನ ಪ್ರಮಾಣಿಕರನ್ನು ತುಂಬಿಕೊಂಡು ಸಾಗಿತ್ತು. ಈ ವೇಳೆ ಸಂಗಮದ ಎರಡನೇ ಹೇರ್ ಪಿನ್ ತಿರುವಿನಲ್ಲಿ ಬಸ್‌ನ ಬ್ರೇಕ್ ರಾಡ್ ತುಂಡಾಗಿದ್ದು, ಚಾಲಕನ ನಿಯಂತ್ರಣ ತಪ್ಪಿ ತಡೆ ಗೋಡೆಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಚಾಲಕ ರಘುಪತಿ (58) ಅವರಿಗೆ ಗಾಯವಾಗಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತಡೆಗೋಡೆ ಇಲ್ಲದಿದ್ದರೆ ಬಸ್ ಕಂದಕಕ್ಕೆ ಉರುಳಿ ಅಪಾರ ಸಾವು ನೋವು ಸಂಭವಿಸುತಿತ್ತು. ಸಾತನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೃದ್ಧೆ ಸಾವು: ಕನಕಪುರ ತಾಲೂಕಿನ ಜಕ್ಕೇಗೌಡನದೊಡ್ಡಿ ಬಳಿ ಬುಧವಾರ ಮಧ್ಯಾಹ್ನ ಕಾರು ಗುದ್ದಿ ಮಹಿಳೆ ಮೃತಪಟ್ಟಿದ್ದಾರೆ. ಟಿ.ಬೇಕುಪ್ಪ ಪಂಚಾಯಿತಿ ವ್ಯಾಪ್ತಿಯ ಜಯಲಕ್ಷ್ಮೀಪುರ ಗ್ರಾಮದ ಕವೀಣಾ (70) ಮೃತೆ. ಜಕ್ಕೇಗೌಡನದೊಡ್ಡಿ ಸಮೀಪದ ಹಕ್ಕಿಪಿಕ್ಕಿ ಕಾಲನಿಗೆ ಬಂದು ಊರಿಗೆ ವಾಪಾಸಾಗಲು ಬಸ್ ಹತ್ತಲು ತೆರಳುತ್ತಿದ್ದ ಆಕೆಗೆ ಕಾರು ಗುದ್ದಿಕೊಂಡು ಪರಾರಿಯಾಗಿದೆ. ಅಪಘಾತದ ರಭಸಕ್ಕೆ ಕವೀಣಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸಾತನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂವರು ಮೃತ: ಮಾಗಡಿಯಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ. ಬೆಂಗಳೂರಿನಿಂದ ಮಡಕೆ ಟೀ ಕುಡಿಯುವ ಸಲುವಾಗಿ 8 ಮಂದಿ ಸ್ನೇಹಿತರು ಕಾರಿನಲ್ಲಿ ಮಾಗಡಿ ಸಮೀಪದ ತಾಳೆಕೆರೆ ಹ್ಯಾಂಡ್ ಪೋಸ್ಟ್‌ಗೆ ಬರುವಾಗ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿ ಇಬ್ಬರು ಮೃತಪಟ್ಟಿದ್ದಾರೆ.
ಮಂಜುನಾಥ್ (31) ಮತ್ತು ರವಿಕಿರಣ್ (30) ಮೃತರು. ಕಾರಿನಲ್ಲಿದ್ದವರು ಬೆಂಗಳೂರು ದಕ್ಷಿಣ ತಾಲೂಕಿನ ಗಂಗಪ್ಪನಹಳ್ಳಿ, ಹೊಸಪಾಳ್ಯದ ಸುತ್ತಮುತ್ತಲ ಗ್ರಾಮದವರು. ಎಲ್ಲರೂ ಕ್ರಷರ್ ಮಾಲೀಕರು ಮತ್ತು ಚಾಲಕರಾಗಿದ್ದು, ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ತಾಳೆಕರೆ ಹ್ಯಾಂಡ್ ಪೋಸ್ಟ್ ಬಳಿ ಮಡಕೆ ಟೀ ಕುಡಿಯುವ ಸಲುವಾಗಿ ಕಾರಿನಲ್ಲಿ ಬರುತ್ತಿದ್ದ ವೇಳೆ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಮಾಗಡಿಯ ಹೊಸ ಪಾಳ್ಯದ ಜನತಾ ಕಾಲನಿಯ ಸಮೀಪದ ತಿರುವಿನಲ್ಲಿ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಕಾರಿನ ಮಾಲೀಕ ಕುಶಾಲ್, ಚಾಲಕ ಗಾಣಕಲ್‌ನ ನಾಗರಾಜು, ಬೈರೇಗೌಡ, ಚರಣ್, ಸಂತೊಷ್ ಅವರಿಗೆ ಗಾಯಗಳಾಗಿದ್ದು, ಬೆಂಗಳೂರಿನ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ. ಮಾಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಾದಚಾರಿ ಸಾವು
ಮಾಗಡಿಯ ಹೊಸಪಾಳ್ಯದ ವೃತ್ತದ ಬಳಿ ಬುಧವಾರ ಮಧ್ಯಾಹ್ನ ಬೈಕ್ ಡಿಕ್ಕಿಯಾಗಿ ಪಾದಚಾರಿ ಮೃತಪಟ್ಟಿದ್ದಾರೆ. ಮಾಗಡಿ ತಾಲೂಕಿನ ಗುಮ್ಮ ಸಂದ್ರದ ಸಿದ್ದಪ್ಪ (45) ಮೃತ. ಗ್ರಾಮಕ್ಕೆ ನಡೆದುಕೊಂಡು ಹೋಗುತ್ತಿದ್ದ ಸಿದ್ದಪ್ಪ ಅವರಿಗೆ ರಾಮನಗರ ಕಡೆಯಿಂದ ಬಂದ ಬೈಕ್ ಸವಾರ ಡಿಕ್ಕಿಹೊಡೆದಿದ್ದು, ಸಿದ್ದಪ್ಪ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕುಣಿಗಲ್ ಮೂಲದ ಬೈಕ್ ಸವಾರ ಮೋಹನ್ ಕುಮಾರ್ ಎಂಬಾತನಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಾಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಬ್ಬರಿಗೆ ಗಾಯ
ಹಾರೋಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾರೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿಯೊಡೆದ ಪರಿಣಾಮ ಚಂದ್ರು ಮತ್ತು ಜೀವಿತ್ ಕುಮಾರ್ ಗಾಯಗೊಂಡವರು. ಸ್ವಗ್ರಾಮ ನೇರಳೇಮರದೊಡ್ಡಿಯಿಂದ ಹಾರೋಹಳ್ಳಿ ಪಟ್ಟಣಕ್ಕೆ ಬರುವ ವೇಳೆ ಅಪಘಾತ ಸಂಭವಿಸಿದೆ.