

ಬೆಳ್ತಂಗಡಿ: ಜ್ಞಾನ, ಕೌಶಲ ಆಧರಿಸಿದ ಮೌಲ್ಯವರ್ಧಿತ ಕಾರ್ಯವೈಖರಿಯ ಬೋಧನೆ ಮತ್ತು ಕಲಿಕೆ ಪ್ರಕ್ರಿಯೆ ವರ್ತಮಾನದ ಅಗತ್ಯ. ಭವಿಷ್ಯದ ಆದ್ಯತೆಗಳಿಗೆ ಅನುಗುಣವಾಗಿ ಉನ್ನತೀಕರಿಸಬಹುದು ಎಂದು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್. ಹೇಳಿದರು.
ಉಜಿರೆ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ವಿವಿಧ ವಿಭಾಗಗಳ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಪರಿಶೀಲನಾ ಪ್ರಕ್ರಿಯೆಗೆ ಮಂಗಳವಾರ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರದ ಡೀನ್ ಡಾ.ಸೌಮ್ಯಾ ಬಿ.ಪಿ.ಮಾತನಾಡಿ, ಬೋಧನೆ, ಸಂಶೋಧನೆ, ಪಠ್ಯ ಕೇಂದ್ರಿತ ಕಲಿಕೆ, ಪಠ್ಯೇತರ ಚಟುವಟಿಕೆಗಳು, ಸಮಾಜಪರ ವಿಸ್ತರಣಾ ಹೆಜ್ಜೆಗಳೊಂದಿಗೆ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ ಗುರುತಿಸಿಕೊಂಡಿದೆ. ವಿದ್ಯಾರ್ಥಿಗಳು ಅಧ್ಯಯನನಿರತರಾದಾಗಲೇ ಬೋಧನೆ ಅವಕಾಶ ಒದಗಿಸುವ ‘ಸ್ಟುಡೆಂಟ್ ಫ್ಯಾಕಲ್ಟಿ’ ಪರಿಕಲ್ಪನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ ಎಂದರು.
ಶೈಕ್ಷಣಿಕ ಮತ್ತು ಆಡಳಿತಾತ್ಮಕ ಪರಿಶೀಲನಾ ಸಮಿತಿ ತಜ್ಞರಾದ ಎಸ್.ಡಿ.ಎಂ. ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಡಾ.ಜಯಕುಮಾರ್ ಎ.ಶೆಟ್ಟಿ, ಎಸ್.ಡಿ.ಎಂ.ಶಿಕ್ಷಣ ಸಂಸ್ಥೆಯ ಅಕಾಡೆಮಿಕ್ ಸಂಯೋಜಕ ಎಸ್.ಎನ್.ಕಾಕತ್ಕರ್, ಉಪಪ್ರಾಂಶುಪಾಲೆ ನಂದಕುಮಾರಿ ಕೆ.ಪಿ. ಉಪಸ್ಥಿತರಿದ್ದರು.