11ರಂದು ವಿಗ್ರಹ ಪ್ರತಿಷ್ಠಾಪನೆ, ಸಮುದಾಯ ಭವನ ಲೋಕಾರ್ಪಣೆ : ಬ್ರಹ್ಮಶ್ರೀ ನಾರಾಯಣಗುರುವರ್ಯರ ಜ್ಞಾನಮಂದಿರದಲ್ಲಿ ಸಂಭ್ರಮ

04
Published on

ಬಂಟ್ವಾಳ: ರಾಯಿ, ಕೈೊ ಲ, ಅರಳ ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸಮಾಜ ಸೇವಾ ಸಂಘ ಆಶ್ರಯದಲ್ಲಿ ನೂತನವಾಗಿ ನಿರ್ಮಾಣಗೊಂಡ ಬ್ರಹ್ಮಶ್ರೀ ನಾರಾಯಣ ಗುರುವರ್ಯರ ಜ್ಞಾನಮಂದಿರದಲ್ಲಿ ಗುರುಗಳ ವಿಗ್ರಹ ಪ್ರತಿಷ್ಠಾಪನೆ ಹಾಗೂ ಸಮುದಾಯ ಭವನದ ಲೋಕಾರ್ಪಣೆ ಮೇ 11ರಂದು ಭಾನುವಾರ ನಡೆಯಲಿದೆ ಎಂದು ಪ್ರತಿಷ್ಠಾಪನಾ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಾಸ್ತುಶಿಲ್ಪಿ ಪ್ರಮಲ್‌ಲ್ ಕುಮಾರ್ ಕಾರ್ಕಳ ಅವರ ವಾಸ್ತುಶಿಲ್ಪದಂತೆ, ಸದಾನಂದ ಶಾಸ್ತ್ರಿ ವೇಣೂರು ಪೌರೋಹಿತ್ಯದಲ್ಲಿ ಲಕ್ಷ್ಮಣ ಶಾಂತಿ ಕುದ್ರೋಳಿ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ. ಬಿ.ಸಿ.ರೋಡಿನ ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಬಳಿಯಿಂದ ಗುರುಗಳ ಮೂರ್ತಿಯ ಮೆರವಣಿಗೆ ಹಾಗೂ ಹಸಿರು ಹೊರೆಕಾಣಿಕೆ ಮೆರವಣಿಗೆ ಮೇ 9ರಂದು ಸಂಜೆ 4ಕ್ಕೆ ಆರಂಭವಾಗಲಿದೆ. ಬ್ರಹ್ಮಶ್ರೀ ನಾರಾಯಣಗುರುಗಳ ಪಂಚಲೋಹದ ವಿಗ್ರಹವನ್ನು ಕುದ್ರೋಳಿ ಕ್ಷೇತ್ರದಿಂದ ತಂದು ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣಗುರು ಮಂದಿರದಿಂದ ಮೆರವಣಿಗೆ ಮೂಲಕ ನೂತನ ಜ್ಞಾನ ಮಂದಿರಕ್ಕೆ ತರಲಾಗುವುದು ಎಂದರು.

ಮೇ 10ರಂದು ಸಂಜೆ 4.30ರಿಂದ 9.30ರವರೆಗೆ ಭಜನಾ ಸಂಕೀರ್ತನೆ, ವೈದಿಕ ಕಾರ್ಯಕ್ರಮಗಳು ನಡೆಯಲಿವೆ. 11ರಂದು ಬೆಳಗ್ಗೆ 6ರಿಂದ ಶ್ರೀ ಗಣಪತಿ ಅಷ್ಟದ್ರವ್ಯ ಹೋಮ, ಕಲಶ ಪ್ರತಿಷ್ಠಾಪನಾ ಪೂಜೆ, ಕಲಶ ಹೋಮ ನಡೆಯಲಿದೆ. ಬೆಳಗ್ಗೆ 7.18ಕ್ಕೆ ಗುರುಗಳ ಮೂರ್ತಿಯ ಪ್ರತಿಷ್ಠಾಪನೆ, ಪಂಚಾಮೃತ ಅಭಿಷೇಕ, ಕಲಶಾಭಿಷೇಕ, ಅಲಂಕಾರ ಪ್ರತಿಷ್ಠಾಪನಾ ಹೋಮ, ಗುರು ನಾಮಾರ್ಚನೆ ನಡೆಯಲಿದೆ. ಬೆಳಗ್ಗೆ 10 ಗಂಟೆಗೆ ನಾರಾಯಣಗುರು ಚಿಂತನಾ ಸಮಾವೇಶ ನೆರವೇರಲಿದೆ. ನೂತನ ಜ್ಞಾನ ಮಂದಿರವನ್ನು ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ, ಸಮುದಾಯ ಭವನವನ್ನು ಉದ್ಯಮಿ ಬಿ.ಪ್ರಕಾಶ್ ಶೆಟ್ಟಿ, ಅನ್ನಛತ್ರವನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಸಭಾ ವೇದಿಕೆಯನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಲಿದ್ದು, ಶಾಸಕ ರಾಜೇಶ್ ನಾಕ್ ಅಧ್ಯಕ್ಷತೆ ವಹಿಸುವರು. ಸಂಸದ ಬೃಜೇಶ್ ಚೌಟ ಸೇರಿದಂತೆ ಶಾಸಕರು, ಮತ್ತಿತರ ಗಣ್ಯರು ಭಾಗವಹಿಸಲಿರುವರು. ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಸಾಮೂಹಿಕ ಪ್ರಾರ್ಥನೆ, ಶಾಂತಿಮಂತ್ರ ನಡೆಯಲಿದೆ. ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.

ಸಂಜೆ 7ಕ್ಕೆ ಸಂಘ ಅಧ್ಯಕ್ಷ ಶೇಖರ್ ಅಂಚನ್ ಪಿಲ್ಕಾಜೆಗುತ್ತು ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಮಾಜಿ ಶಾಸಕ ಎ.ರುಕ್ಮಯ ಪೂಜಾರಿ, ಅರಳ ಶ್ರೀ ಗರುಡ ಮಹಾಕಾಳಿ ದೇವಸ್ಥಾನದ ಆಡಳಿತ ಮೊಕ್ತೇಸರ ಎ.ರಾಜೇಂದ್ರ ಶೆಟ್ಟಿ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.

ಪ್ರತಿಷ್ಠಾಪನಾ ಮಹೋತ್ಸವ ಸಮಿತಿಯ ಅಧ್ಯಕ್ಷ ಜಯಪ್ರಕಾಶ್ ಜೆ.ಎಸ್., ಬಂಟ್ವಾಳ ತಾಲೂಕು ಯುವವಾಹಿನಿ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ, ರಾಯಿ ಗ್ರಾಪಂ ಅಧ್ಯಕ್ಷ ಸಂತೋಷ್ ಕುಮಾರ್ ರಾಯಿಬೆಟ್ಟು ಉಪಸ್ಥಿತರಿದ್ದರು.

ಅವಧೂತ ವಿನಯ ಗುರೂಜಿ ಭಾಗಿ

ಹೊರೆಕಾಣಿಕೆ ಮೆರವಣಿಗೆಯಲ್ಲಿ ಅವಧೂತ ವಿನಯ ಗುರೂಜಿ ಭಾಗವಹಿಸಲಿದ್ದಾರೆ. ಅವರು ಜ್ಞಾನಮಂದಿರದಲ್ಲಿ ನಿರ್ಮಿಸಿರುವ ಗ್ರಂಥಾಲಯವನ್ನು ಉದ್ಘಾಟಿಸುವರು. ವಿವಿಧ ಭಜನಾ ತಂಡಗಳು ಹೊರೆಕಾಣಿಕೆ ಮೆರವಣಿಗೆಗೆ ಮೆರುಗು ನೀಡಲಿದೆ ಎಂದು ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸಮಾಜ ಸೇವಾ ಸಂಘ ಅಧ್ಯಕ್ಷ ಶೇಖರ್ ಅಂಚನ್ ಪಿಲ್ಕಾಜೆಗುತ್ತು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net