ಚಳಗೇರಿಗೆ ಎಸಿ ಶಿವಾನಂದ ಉಳ್ಳಾಗಡ್ಡಿ ಭೇಟಿ

12-RNR-01
Published on

ರಾಣೆಬೆನ್ನೂರ: ತಾಲೂಕಿನ ಚಳಗೇರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ -4ರ ಸೇತುವೆಯ ಕೆಳ ರಸ್ತೆ ದುರಸ್ತಿಗೆ ಆಗ್ರಹಿಸಿ ಗ್ರಾಮಸ್ಥರು ಫೆ. 15ರಂದು ನಿರಂತರ ಧರಣಿ ಹಮ್ಮಿಕೊಳ್ಳುವ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿ ಹಾಗೂ ಡಿವೈಎಸ್ಪಿ ಟಿ.ವಿ. ಸುರೇಶ ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಈ ವೇಳೆ ಗ್ರಾಪಂ ಸದಸ್ಯ ಭರಮಪ್ಪ ಕರೂರ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ- 4ರ ಸೇತುವೆಯ ಕೆಳ ರಸ್ತೆ ದುರಸ್ತಿಗಾಗಿ ಗ್ರಾಮಸ್ಥರೆಲ್ಲ 10 ವರ್ಷದಿಂದ ಹೋರಾಟ ಮಾಡುತ್ತಿದ್ದೇವೆ. ಆದರೆ, ಈವರೆಗೂ ದುರಸ್ತಿ ಕಾರ್ಯ ಮಾಡಿಲ್ಲ. ಇದರಿಂದಾಗಿ ನಿತ್ಯವೂ ವಾಹನ ಸವಾರರು ಸೇತುವೆ ಕೆಳ ರಸ್ತೆ ಮಾರ್ಗವಾಗಿ ಸಂಚರಿಸಲು ಹರಸಾಹಸ ಪಡುವಂತಾಗಿದೆ ಎಂದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಅವೈಜ್ಞಾನಿಕವಾಗಿ ಸೇತುವೆ ನಿರ್ವಿುಸಿದ ಕಾರಣ ಇಡೀ ಗ್ರಾಮಸ್ಥರು ಶಿಕ್ಷೆ ಅನುಭವಿಸುವಂತಾಗಿದೆ. ರಸ್ತೆಯನ್ನು ನೆಲಮಟ್ಟಕ್ಕಿಂತ ಒಂದೂವರೆ ಅಡಿ ಕೆಳಗೆ ಮಾಡಿದ್ದರಿಂದ ಈ ಸಮಸ್ಯೆ ಉದ್ಭವವಾಗಿದೆ. ಮಳೆಗಾಲದಲ್ಲಿ ಮಳೆ ನೀರು ಸೇತುವೆ ಕೆಳಗೆ ನಿಲ್ಲುವುದರಿಂದ ಜನರು ಓಡಾಡಲು ಆಗುವುದಿಲ್ಲ. ಮಳೆ ಇಲ್ಲದ ಸಮಯದಲ್ಲಿ ಗ್ರಾಮದ ಚರಂಡಿ ನೀರು ಗಟಾರು ಮೂಲಕ ಹರಿದು ಸೇತುವೆ ಕೆಳಗೆ ಜಮಾ ಆಗುತ್ತಿದೆ. ಆದ್ದರಿಂದ ಗ್ರಾಮಸ್ಥರು ಕೊಳಚೆ ನೀರಿನಲ್ಲಿಯೇ ನಿತ್ಯ ಓಡಾಡಬೇಕಾಗಿದೆ. ಇದೀಗ ಷಟ್ಪಥ ರಸ್ತೆ ಮಾಡಲಾಗುತ್ತಿದೆ. ಈಗಲಾದರೂ ಸೇತುವೆಯ ಕೆಳ ಮಟ್ಟದ ರಸ್ತೆಯನ್ನು ಎರಡು ಅಡಿಯಷ್ಟು ಎತ್ತರ ಮಾಡಬೇಕು. ಅಂದಾಗ ಸೇತುವೆ ಕೆಳಗೆ ನೀರು ನಿಲ್ಲುವುದನ್ನು ತಡೆಗಟ್ಟಲು ಸಾಧ್ಯ ಎಂದರು.

ಉಪವಿಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿ ಮಾತನಾಡಿ, ಕೆಳ ಸೇತುವೆ ರಸ್ತೆ ಸಮಸ್ಯೆ ಕುರಿತು ಈಗಾಗಲೇ ಹೆದ್ದಾರಿ ಪ್ರಾಧಿಕಾರದವರ ಗಮನಕ್ಕೆ ತರಲಾಗಿದೆ. ಗ್ರಾಮಸ್ಥರ ಬೇಡಿಕೆ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗುವುದು. ಅವರಿಂದ ಉತ್ತರ ಬರುವವರೆಗೂ ಧರಣಿ ಮುಂದೂಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮಸ್ಥರು, ನೀವು ಈಗ ಭರವಸೆ ಕೊಟ್ಟು ಮುಂದೆ ವರ್ಗಾವಣೆಯಾಗಿ ಹೋಗುತ್ತೀರಿ. ಆದ್ದರಿಂದ ನಮಗೆ ಲಿಖಿತ ರೂಪದಲ್ಲಿ ಭರವಸೆ ನೀಡಬೇಕು ಎಂದು ಆಗ್ರಹಿಸಿದರು. ಆಗ ಅಧಿಕಾರಿಗಳು ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಅಧಿಕಾರಿಗಳು ಗ್ರಾಮಸ್ಥರ ಬೇಡಿಕೆಗೆ ಒಪ್ಪಿದ ಕಾರಣ ಧರಣಿ ಮುಂದೂಡುವುದಾಗಿ ಗ್ರಾಮಸ್ಥರು ತಿಳಿಸಿದರು.

ತಹಸೀಲ್ದಾರ್ ಶಂಕರ ಜಿ.ಎಸ್., ಸಿಪಿಐ ಶ್ರೀಶೈಲ ಚೌಗಲಾ, ಗ್ರಾಮ ಲೆಕ್ಕಿಗ ರುದ್ರೇಶ ಎ.ಸಿ. ಹಾಗೂ ಗ್ರಾಮದ ಪ್ರಮುಖರಾದ ಮಂಜುನಾಥ ಮಜ್ಜಗಿ, ಪವಿತ್ರ ಕುಮಾರ ನಾಗೇನಹಳ್ಳಿ, ಕೃಷ್ಣ ಕೆಂಚರೆಡ್ಡಿ, ಶಿವನಗೌಡ ಪಾಟೀಲ, ಭರಮಗೌಡ ಸಣ್ಣಗೌಡ್ರ, ಸುರೇಶ ದೂಳೆಹೊಳೆ, ಶಿವರಾಜ ಹೊಳೆಅಂಗಡಿ, ಜಗದೀಶ ತೆಂಬದ, ಆನಂದ ಇಟಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net