

ತುಮಕೂರು: ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸಾರಿಗೆ ಬಸ್ ಸೌಲಭ್ಯ ಕಲ್ಪಿಸುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿ ನಗರದ ಟೌನ್‌ಹಾಲ್ ವೃತ್ತದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಮಾನವ ಸರಪಳಿ ರಚಿಸಿ ರಸ್ತೆ ತಡೆ ನಡೆಸಲಾಯಿತು.
ನಗರದ ಟೌನ್‌ಹಾಲ್ ವೃತ್ತದಲ್ಲಿ ಮಂಗಳವಾರ ಎಬಿವಿಪಿ ನೇತೃತ್ವದಲ್ಲಿ ಮಾನವ ಸರಪಳಿ ರಚಿಸಿ ಅರ್ಧಗಂಟೆಗು ಹೆಚ್ಚು ಕಾಲ ರಸ್ತೆ ತಡೆ ನಡೆಸಿ ಪ್ರತಿಭಟಿಸಿದ ವಿದ್ಯಾರ್ಥಿಗಳು, ಶಾಲಾ-ಕಾಲೇಜಿಗೆ ತೆರಳುವ ಸಮಯದಲ್ಲಿ ಹಾಗೂ ಹಿಂತಿರುಗುವ ಸಮಯದಲ್ಲಿ ಬಸ್ಸಿನ ಸಂಖ್ಯೆಯನ್ನು ಹೆಚ್ಚಿಸಬೇಕು. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಬಸ್ಸಿನ ವ್ಯವಸ್ಥೆ ಕಲ್ಪಿಸಬೇಕು. ಶಕ್ತಿ ಯೋಜನೆ ಅಡಿ ಈಗಾಗಲೇ ವಿದ್ಯಾರ್ಥಿನಿಯರಿಗೆ ಉಚಿತ ಬಸ್ಸಿನ ಪ್ರಯಾಣ ಒದಗಿಸಿರುವ ಹಾಗೆ ವಿದ್ಯಾರ್ಥಿಗಳಿಗೂ ಉಚಿತವಾಗಿ ಬಸ್ಸಿನ ಪ್ರಯಾಣವನ್ನು ಕಲ್ಪಿಸುವಂತೆ ಘೋಷಣೆಗಳನ್ನು ಕೂಗಿದರು.
ಈ ವೇಳೆ ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಅಪ್ಪು ಪಾಟೀಲ್, ಜಿಲ್ಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಹೋಗಲು ಸರ್ಕಾರಿ ಬಸ್‌ನ ಮೇಲೆ ಅವಲಂಬಿತರಾಗಿದ್ದು ಸೂಕ್ತ ಬಸ್ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಹಳ್ಳಿಗಳಿಂದ ಪಟ್ಟಣದ ಕಾಲೇಜುಗಳಿಗೆ ಬರುವತಂಹ ವಿದ್ಯಾರ್ಥಿಗಳಿಗೆ ಶಕ್ತಿ ಯೋಜನೆಯಿಂದಾಗಿ ಬಸ್ ಕೊರತೆ ಎದುರಾಗಿದ್ದು ಸಮಯಕ್ಕೆ ಸರಿಯಾಗಿ ಶಾಲಾ-ಕಾಲೇಜುಗಳಿಗೆ ಬರುವುದಕ್ಕೆ ಸಾಧ್ಯವಾಗುತ್ತಿಲ್ಲ. ಪರೀಕ್ಷೆಗಳಿಗೆ ಹಾಜರಾಗಲು ವಿದ್ಯಾರ್ಥಿಗಳಿಗೆ ಕಷ್ಟದ ಪರಿಸ್ಥಿತಿಯನ್ನುಂಟು ಮಾಡಿದೆ. ಗ್ರಾಮೀಣ ಸಾರಿಗೆ ಹೆಚ್ಚಿಸುವಂತೆ ಆಗ್ರಹಿಸಿದರು.
ಬಸ್ ಸಮಸ್ಯೆಯಿಂದಾಗಿ ಕಳೆದ ಕೆಲವು ದಿನಗಳ ಹಿಂದೆ ಹಾವೇರಿ, ಚಿಕ್ಕಬಳ್ಳಾಪುರ, ತುಮಕೂರು ಹಾಗೂ ರಾಜ್ಯದ ಹಲವು ಕಡೆ ಸಾರಿಗೆ ಬಸ್ ಹತ್ತುವ ವೇಳೆ ವಿದ್ಯಾರ್ಥಿಗಳು ಅಪಘಾತ ಸಂಭವಿಸಿವೆ. ವಿದ್ಯಾರ್ಥಿಗಳ ಪ್ರಾಣಹಾನಿ ಆಗುವ ಮುನ್ನ ಸರ್ಕಾರ ಎಚ್ಚೆತ್ತುಕೊಂಡು ಹೆಚ್ಚಿನ ಬಸ್ ಸೌಕರ್ಯ ಕಲ್ಪಿಸಿ ವಿದ್ಯಾರ್ಥಿಗಳ ಓದಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆ ನೇತೃತ್ವವನ್ನು ಎಬಿವಿಪಿ ವಿಭಾಗ ಸಂಚಾಲಕ ಗಣೇಶ್, ಜಿಲ್ಲಾ ಸಂಚಾಲಕ ಗುರುಪ್ರಸಾದ್, ಕಾಯಕರ್ತರಾದ ಪ್ರಜ್ವಲ್, ವಿಶ್ವಾಸ್, ಹೇಮಂತ್, ಹರ್ಷವರ್ಧನ್ ಹಾಗೂ ನೂರಾರು ಜನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.