

ತುಮಕೂರು:- ವಿದ್ಯಾರ್ಥಿ ವೇತನ, ಹಾಸ್ಟೆಲ್ ಸಮಸ್ಯೆ, ಸಾರಿಗೆ ಬಸ್ ಸಮಸ್ಯೆ ಸೇರಿದಂತೆ ಶಾಲಾ-&ಕಾಲೇಜು ವಿದ್ಯಾರ್ಥಿಗಳ ವಿವಿಧ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ನೇತೃತ್ವದಲ್ಲಿ ನಗರದ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಲಾಯಿತು. ಈ ವೇಳೆ ಪೊಲೀಸ್ ಬ್ಯಾರಿಕೇಡ್ ಹತ್ತಿ ಡಿಸಿ ಕಚೇರಿ ಒಳ ನುಗ್ಗಲು ಯತ್ನಿಸಿದ ಎಬಿವಿಪಿ ಕಾರ್ಯಕರ್ತರನ್ನು ಪೊಲೀಸರು ಬಲವಂತವಾಗಿ ಬಂಧಿಸಿ ಹೊತ್ತೊಯ್ಯದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಶುಕ್ರವಾರ ಎಬಿವಿಪಿ ಜಿಲ್ಲಾ ಸಂಟನಾ ಕಾರ್ಯದರ್ಶಿ ಸುನಿಲ್ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು, ಶಾಲಾ&ಕಾಲೇಜು ವಿದ್ಯಾರ್ಥಿಗಳ ನೂರಾರು ಸಮಸ್ಯೆಗಳನ್ನು ಎದರಿಸುತ್ತಿದ್ದು ಮೌನವಹಿಸಿರುವ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು.
ರಾಜ್ಯದಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹಾಸ್ಟೆಲ್ಗಳ ಸಂಖ್ಯೆ ಹೆಚ್ಚಳ ಮಾಡಬೇಕು, ತರಗತಿಗಳು ಪ್ರಾರಂಭವಾಗಿ ತಿಂಗಳಾದ ನಂತರ ವಿದ್ಯಾರ್ಥಿಗಳ ಹಾಸ್ಟೆಲ್ ಆಯ್ಕೆ ಪ್ರವೇಶಾತಿ ಆರಂಭಿಸಲಾಗಿದೆ. ವಿದ್ಯಾರ್ಥಿಗಳ ಶಾಲಾ-ಕಾಲೇಜು ಸಮಯದಲ್ಲಿ ಸಾರಿಗೆ ಬಸ್ಗಳ ಸಂಖ್ಯೆಯನ್ನು ಹೆಚ್ಚಳ ಮಾಡಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸಿದರು.
ಏಕರೂಪ ವೇಳಾಪಟ್ಟಿ: ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಿಗೆ ಏಕರೂಪ ಶಿಕ್ಷಣ ವೇಳಾಪಟ್ಟಿಯನ್ನು ಸಮರ್ಪಕವಾಗಿ ಜಾರಿ ಮಾಡುವಂತೆ ಸೂಚಿಸಬೇಕು. ಬಸ್ ಪಾಸ್ ವಿತರಣೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ವೇಳಾಪಟ್ಟಿಗೆ ಅನುಗುಣವಾಗಿ ಅರ್ಜಿ ಸಲ್ಲಿಸಿದ ತಕ್ಷಣವೇ ವಿದ್ಯಾರ್ಥಿಗಳಿಗೆ ಸಿಗುವಂತಾಗಬೇಕು. ಹಾಸ್ಟೆಲ್ಗಳ ಮೂಲಭೂತ ಸೌಕರ್ಯಕ್ಕೆ ಆದ್ಯತೆ ನೀಡಬೇಕು ಹಾಗೂ ಬಾಡಿಗೆ ಕಟ್ಟಡದಲ್ಲಿ ನಡೆಸುತ್ತಿರುವ ಹಾಸ್ಟೆಲ್ಗಳಿಗೆ ಸ್ವಂತ ಕಟ್ಟಡವನ್ನು ನೀಡಬೇಕು. ಎಸ್ಸಿ-ಎಸ್ಟಿ ವರ್ಗದ ವಿದ್ಯಾರ್ಥಿಗಳಿಗೆ ಬಳಕೆ ಮಾಡುವ ಎಸ್ಸಿಪಿ ಹಾಗೂ ಟಿಎಸ್ಪಿ ಅನುದಾನವನ್ನು ಬೇರೆ ಯೋಜನೆಗಳಿಗೆ ಬಳಕೆ ಮಾಡಿರುವ ಕುರಿತು ಸರ್ಕಾರ ಸ್ಪಷ್ಟತೆ ನೀಡಬೇಕು ಎಂದು ಆಗ್ರಹಿಸಿದರು.
ವಿಶ್ವವಿದ್ಯಾಲಯಗಳ ಶೈಕ್ಷಣಿಕ ವೇಳಾಪಟ್ಟಿಯಲ್ಲಿ ಬಹಳಷ್ಟು ಬದಲಾವಣೆ ಇರುವುದರಿಂದ ವಿದ್ಯಾರ್ಥಿಗಳು ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಸರ್ಕಾರ ಈ ಬಗ್ಗೆ ಗಮನಹರಿಸಿ ಬಡ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಪ್ರತಿಭಟನಾಕಾರರು ಮನವಿ ಮಾಡಿದರು.
ಡಿಸಿ ಕಚೇರಿಗೆ ಮತ್ತಿಗೆ ಯತ್ನ: ರಾಜ್ಯ ಸರ್ಕಾರದ ವಿದ್ಯಾರ್ಥಿ ವಿರೋಧಿ ನೀತಿ ಧೋರಣೆಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ಎಬಿವಿಪಿ ಕಾರ್ಯಕರ್ತರು ಏಕಾಏಕಿ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದರು. ಎಬಿವಿಪಿ ಜಿಲ್ಲಾ ಸಂಚಾಲಕ ಭರತ್, ಸಹ ಸಂಚಾಲಕ ಚಂದ್ರಮೌಳಿ, ಗಣೇಶ್, ಗುರುಪ್ರಸಾದ್, ವಿಶ್ವಾಸ್, ಜೀವನ್ ಸೇರಿದಂತೆ ಹಲವು ಕಾರ್ಯಕರ್ತರನ್ನು ಸ್ಥಳದಲ್ಲೇ ಇದ್ದ ಪೊಲೀಸರು ಪ್ರತಿಭಟನಾಕಾರರು ವಶಕ್ಕೆ ಪಡೆದು ಪೊಲೀಸ್ ವಾಹನದಲ್ಲಿ ತುಂಬಿಕೊಂಡು ಡಿಎಆರ್ ಮೈದಾನಕ್ಕೆ ಕರೆದೊಯ್ಯದರು.