

ಯಲ್ಲಾಪುರ: ಅಪರಿಚಿತ ವ್ಯಕ್ತಿಯೊಬ್ಬರು ಬೇರೆ ಬೇರೆ ದೂರವಾಣಿ ಸಂಖ್ಯೆಗಳಿಂದ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ರಾಜ್ಯ ಅರಣ್ಯ ಗುತ್ತಿಗೆದಾರರ ಸಂಘದ ಗೌರವಾಧ್ಯಕ್ಷ ದತ್ತಮೂರ್ತಿ ಹೆಗಡೆ ಆರೋಪಿಸಿದರು.
ಸೋಮವಾರ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಗೌರವಕ್ಕೆ ಚ್ಯುತಿ ಬರುವಂತೆ, ಬ್ರಾಹ್ಮಣ ಜಾತಿ ಸೂಚಕ ಬಳಸಿ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿದ್ದಾರೆ. ಜಾತಿಯ ಹೆಸರಿನಲ್ಲಿ ಸಾಮಾಜಿಕ ಸ್ವಾಸ್ಥ್ಯ ಕೆಡಿಸಲು ಯತ್ನಿಸುತ್ತಿದ್ದಾರೆ. ಅರಣ್ಯ ಗುತ್ತಿಗೆಯ ವಿಚಾರದಲ್ಲಿ ನಾನು ರಾಜ್ಯಾದ್ಯಂತ ಓಡಾಡುತ್ತಿದ್ದು, ಗುತ್ತಿಗೆದಾರರ ಹಿತ ಕಾಯಲು ಪ್ರಯತ್ನಶೀಲನಾಗಿದ್ದೇನೆ. ಈ ವೇಳೆ ಅನಾಮಧೇಯ ವ್ಯಕ್ತಿಯಿಂದ ಕರೆ ಬರುತ್ತಿದೆ ಎಂದು ದೂರಿದರು.
ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಕರೆ ಮಾಡಿದ ವ್ಯಕ್ತಿ ಸರ್ಕಾರಿ ನೌಕರನೆಂಬ ಗುಮಾನಿ ಇದೆ. ಯಾರೇ ಆದರೂ ವೃತ್ತಿ, ಹುದ್ದೆ, ಘನತೆಯನ್ನು ಬಿಟ್ಟು, ಅನಪೇಕ್ಷಿತವಾದ ನಡವಳಿಕೆ ತೋರುತ್ತಿರುವವನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಗುತ್ತಿಗೆದಾರ ದ್ಯಾಮಣ್ಣ ಭೋವಿವಡ್ಡರ್ ಮಾತನಾಡಿ, ಬ್ರಾಹ್ಮಣ ಸಮಾಜದ ಮೇಲೆ ಜಾತಿ ನಿಂದನೆ ಮಾಡಿ, ಸಮಾಜಕ್ಕೆ, ಅವರ ಕರ್ತವ್ಯಕ್ಕೆ ಧಕ್ಕೆ ಉಂಟು ಮಾಡಿದ್ದು, ಗುತ್ತಿಗೆದಾರರ ಸಂಘ ತೀವ್ರವಾಗಿ ಖಂಡಿಸುತ್ತಿದೆ. ಪೊಲೀಸ್ ಇಲಾಖೆ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಗುತ್ತಿಗೆದಾರರಾದ ಸಂತೋಷ ನಾಯ್ಕ ಕೋಳಿಕೇರಿ, ಗೋವಿಂದ ಬಸಾಪುರ, ಮಾರುತಿ ಭೋವಿವಡ್ಡರ್, ಹನುಮಂತ ಕೊರವರ, ಸುರೇಶ, ಕಾರ್ತಿಕ ಹೆಗಡೆ ಇದ್ದರು.