

ಗಂಗೊಳ್ಳಿ: ಸಾಲದ ಕಂತು ಕಟ್ಟುವಂತೆ ಸ್ವಸಹಾಯ ಸಂಘದ ಸದಸ್ಯರೊಬ್ಬರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಗಂಗೊಳ್ಳಿ ಗ್ರಾಮದ ಸುಶೀಲಾ ಎಂಬುವರು ಸಂಘದಲ್ಲಿ ಸಾಲ ಪಡೆದಿದ್ದರು. ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡುತ್ತಿದ್ದ ಅವರು ಅಪಘಾತವಾಗಿ ಒಂದು ಕೈ ಕಳೆದುಕೊಂಡಿದ್ದು, ಕಂತು ಕಟ್ಟಲು ವಿಳಂಬವಾಗುತ್ತಿತ್ತು. ಸಾಲದ ಬಗ್ಗೆ ಪುಸ್ತಕದಲ್ಲಿ ನೋಡಿದಾಗ ಮರುಪಾವತಿ ಹಣ ಸಾಲದ ಕಂತಿಗೆ ಹೋಗದ ಕಾರಣ ಸಂಬಂಧಪಟ್ಟವರಲ್ಲಿ ವಿಚಾರಿಸಿದಾಗ ಪಿಆರ್‌ಕೆ, ಎಲ್‌ಐಸಿ ಮೈಕ್ರೋ ಬಜೆಟ್‌ಗಳಿಗೆ ಕಡಿತವಾಗಿದೆ ಎಂದು ತಿಳಿಸಿದ್ದಾರೆ. ಬ್ಯಾಂಕ್ ಖಾತೆ ಪುಸ್ತಕ, ಪಿಆರ್‌ಕೆ, ಎಲ್‌ಐಸಿ ಬಾಂಡ್ ಒದಗಿಸಿದ ಬಳಿಕ ಸಾಲ ಮರುಪಾವತಿ ಮಾಡುವುದಾಗಿ ಸುಶೀಲಾ ತಿಳಿಸಿದ್ದಾರೆ ಎನ್ನಲಾಗಿದೆ. ಜ.28ರಂದು ಸಂಜೆ ರಾಧಾ, ಕನಕ, ಶೋಭಾ, ಭಾರತಿ, ರಮಾವತಿ, ಸರಸ್ವತಿ, ಜಯಂತಿ ಮತ್ತಿತರರು ಸುಶೀಲಾ ಮನೆಗೆ ಅಕ್ರಮ ಪ್ರವೇಶ ಮಾಡಿ ಅವಾಚ್ಯವಾಗಿ ಬೈದಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.