

ಕುಮಟಾ: ಜಾಗತಿಕ ತಾಪಮಾನ ಹಾಗೂ ಪ್ರಾಕೃತಿಕ ವಿಕೋಪದ ವಿನಾಶಗಳನ್ನು ತಡೆಯಲು ಅರಣ್ಯ ಸಮೃದ್ಧಿಯೊಂದೇ ಪರಿಹಾರ. ಉತ್ತರ ಕನ್ನಡ ಜಿಲ್ಲೆಯಲ್ಲೂ ನಿರ್ಲಕ್ಷ್ಯ ಮುಂದುವರಿಸಿದರೆ ಗಂಭೀರ ಪರಿಸ್ಥಿತಿ ಎದುರಿಸಬೇಕಾದೀತು ಎಂದು ಡಿಎಫ್ಒ ರವಿಶಂಕರ ಹೇಳಿದರು.
ತಾಲೂಕಿನ ಹೊಸಾಡಿನಲ್ಲಿರುವ ಅಮೃತಧಾರ ಗೋಶಾಲೆ ಪರಿಸರದಲ್ಲಿ ಅರಣ್ಯ ಇಲಾಖೆ ಸಹಯೋಗದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಜಲಸಂಚಯನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಗತ್ತಿನ ಹಲವು ರಾಷ್ಟ್ರಗಳು ಜಾಗತಿಕ ತಾಪಮಾನ ಏರಿಕೆಯ ಪರಿಣಾಮದಿಂದ ಮುಳುಗಡೆ ಅಪಾಯದಲ್ಲಿದೆ. ಅತಿವೃಷ್ಟಿ, ಅನಾವೃಷ್ಟಿ, ಪ್ರಾಕೃತಿಕ ವಿಕೋಪಗಳು ನಡೆಯುತ್ತಿರುವುದಕ್ಕೆ ಅರಣ್ಯನಾಶವೇ ಮೂಲ ಕಾರಣ. ಈಗಲೂ ಮಾನವ ಎಚ್ಚೆತ್ತುಕೊಳ್ಳದಿದ್ದರೆ ಮನುಕುಲ ಮುಂದಿನ ದಿನಗಳಲ್ಲಿ ಭಾರಿ ಅನಾಹುತ ಎದುರಿಸಬೇಕಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯಲ್ಲೂ ಅರಣ್ಯ ಸಂಪತ್ತು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ನಾವೆಲ್ಲ ಈಗಲೇ ಎಚ್ಚೆತ್ತು, ಪ್ರತಿಯೊಬ್ಬರೂ ಪರಿಸರದ ಗಂಭೀರ ಪರಿಸ್ಥಿತಿ ಅರಿತು, ಸಾಧ್ಯವಾದಷ್ಟು ಹೆಚ್ಚಿಗೆ ಗಿಡಗಳನ್ನು ಬೆಳೆಸಬೇಕು, ಮುಂದಿನ ಪೀಳಿಗೆಗೆ ಈ ಜಗತ್ತನ್ನು ಉಳಿಸಬೇಕು ಎಂದರು.
ಕಾಮಧೇನು ಪೂಜೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಜಲಸಂಚಯನ ಕಾಮಗಾರಿಯಡಿ ಗೋವುಗಳ ಆಹಾರ ಪೂರಕವಾದ ವಿಶೇಷ ತಳಿಯ ಹಲಸಿನ ಸಸಿಗಳನ್ನು ನೆಡಲಾಯಿತು.
ಗೋಶಾಲೆಯ ಉಪಾಧ್ಯಕ್ಷ ಆರ್.ಜಿ. ಭಟ್ಟ ಬಗ್ಗೋಣ ಅಧ್ಯಕ್ಷತೆ ವಹಿಸಿದ್ದರು. ಎಸಿಎಫ್ ಲೋಹಿತ್, ಆರ್ಎಫ್ಒ ಎಸ್.ಟಿ. ಪಟಗಾರ, ಕಲ್ಲಬ್ಬೆ ಗ್ರಾಪಂ ಅಧ್ಯಕ್ಷ ಗಿರಿಯಾ ಗೌಡ, ಪಂಚಾಯಿತಿ ಸದಸ್ಯ ಆರ್.ವಿ. ಹೆಗಡೆ, ಕೋಶಾಧ್ಯಕ್ಷ ಸುಬ್ರಾಯ ಭಟ್ಟ, ಪ್ರಧಾನ ಕಾರ್ಯದರ್ಶಿ ಗೋಪಾಲ ಕೃಷ್ಣ ಉಗ್ರು, ಇತರರು ಉಪಸ್ಥಿತರಿದ್ದರು.
ಕಾರ್ಯದರ್ಶಿ ಅರುಣ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೋಶಾಲೆ ಸದಸ್ಯರಾದ ಸದಾನಂದ ಮಡಿವಾಳ, ಆರ್.ಎನ್. ಹೆಗಡೆ, ಸುರೇಶ ಭಟ್, ನಿವೃತ್ತ ಕೃಷಿ ಅಧಿಕಾರಿ ಎಸ್.ವಿ. ಹೆಗಡೆ, ಮೂರೂರು ಕಲ್ಲಬ್ಬೆ ವಲಯ ಅಧ್ಯಕ್ಷ ಎಲ್.ಆರ್. ಹೆಗಡೆ, ವ್ಯವಸ್ಥಾಪಕ ವಿವೇಕ ಹೆಗಡೆ, ಅರಣ್ಯಾಧಿಕಾರಿ, ಸಿಬ್ಬಂದಿ, ಗೋಪಾಲಕರು ಇನ್ನಿತರರು ಇದ್ದರು.