

ಚನ್ನಗಿರಿ: ವಿಶ್ವ ಮಾನವ ದಿನ, ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ, ಶಿವಯೋಗಿ ಸಿದ್ದರಾಮ, ಮಹಾಯೋಗಿ ವೇಮನ ಜಯಂತಿ, ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮ ಆಚರಣೆ ಸಂಬಂಧ ಗುರುವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಗೆ ತಾಲೂಕು ಮಟ್ಟದ ಯಾವುದೇ ಅಧಿಕಾರಿಗಳು ಬಾರದ ಹಿನ್ನೆಲೆಯಲ್ಲಿ, ಸಭೆ ಮುಂದೂಡಲಾಯಿತು.
ಬೆಳಗ್ಗೆ 11 ಗಂಟೆಗೆ ಕರೆದಿದ್ದ ಪೂರ್ವಭಾವಿ ಸಭೆಗೆ ಮಧ್ಯಾಹ್ನ 12 ಆದರೂ ಅಧಿಕಾರಿಗಳು ಹಾಜರಾಗಲಿಲ್ಲ. ಕಾದು ಕುಳಿತಿದ್ದ ಸಮಾಜದ ಮುಖಂಡರು ಅಧಿಕಾರಿಗಳ ನಡೆಗೆ ಅಸಮಾಧಾನ ವ್ಯಕ್ತಪಡಿಸಿದರು. ಸಭೆಯನ್ನು ಡಿ. 27ರ ಬೆಳಗ್ಗೆ 10 ಗಂಟೆಗೆ ನಡೆಸಲಾಗುವುದು ಎಂದು ತಹಸೀಲ್ದಾರ್ ಪ್ರಕಟಿಸಿದರು.
ಸಾಧಕರ, ಆದರ್ಶ ಪುರುಷರ ಹಾಗೂ ಚಿಂತಕರ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ನಾಡಹಬ್ಬಗಳ ಸಮಿತಿ ಮೂಲಕ ಮನವಿ ಕಳುಹಿಸಿ,ಅಧಿಕಾರಿಗಳ ಸಹಿ ಪಡೆಯಲಾಗಿದೆ. ಮೊದಲೇ ದಿನಾಂಕ ನಿಗದಿ ಮಾಡಲಾಗಿತ್ತು. ಅಧಿಕಾರಿಗಳಿಗೆ ಮಾಹಿತಿ ಇದ್ದಾಗ್ಯೂ ಸಭೆಗೆ ಹಾಜರಾಗದಿರುವುದು ಬೇಸರ ತರಿಸಿದೆ ಎಂದು ತಹಸೀಲ್ದಾರ್ ಕೆ.ಎಸ್.ಶಂಕರಪ್ಪ ವಿಷಾದ ವ್ಯಕ್ತಪಡಿಸಿದರು.
ನಾಡಹಬ್ಬ, ರಾಷ್ಟ್ರೀಯ ಹಬ್ಬಗಳು ವರ್ಷಕೊಮ್ಮೆ ಬರಲಿವೆ. ಅಂತಹ ಸಭೆ ಹಾಗೂ ಕಾರ್ಯಕ್ರಮಗಳಿಗೆ ಭಾಗವಹಿಸದ ಅಧಿಕಾರಿಗಳಿಗೆ ಅನೇಕ ಸಭೆಗಳಲ್ಲಿ ಮೌಖಿಕ ಅದೇಶದೊಂದಿಗೆ ತಿಳಿವಳಿಕೆ ನೀಡಲಾಗಿದೆ. ಗೈರುಹಾಜರಾದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಆಯಾ ಇಲಾಖೆಗಳ ಮೇಲಧಿಕಾರಿಗಳಿಗೆ ಪತ್ರ ಬರೆಯುವುದಾಗಿ ತಿಳಿಸಿದರು.
ವಿಶ್ವಕರ್ಮ ಸಮಾಜದ ಗೌರವಾಧ್ಯಕ್ಷ ಶಂಕರಚಾರ್ ಮಾತನಾಡಿ, ನಿಸ್ವಾರ್ಥ ಸೇವೆ ಸಲ್ಲಿಸಿದ ಮಹನೀಯರ ಸ್ಮರಣೆಗೆ ಸರ್ಕಾರ ಜಯಂತ್ಯುತ್ಸವ ಆಚರಣೆ ಮಾಡಲು ಆದೇಶಿಸಿದೆ. ಆದರೆ ಸಭೆಗೆ ಅಧಿಕಾರಿಗಳು ಗೈರಾಗುವ ಮೂಲಕ ಸಮಾಜಗಳಿಗೆ ಅವಮಾನ ಎಸಗಿದ್ದಾರೆ. ಅವರಿಗೆ ನೋಟಿಸ್ ಜಾರಿ ಮಾಡಿ ಅಮಾನತು ಮಾಡಬೇಕು. ಇಲ್ಲವಾದಲ್ಲಿ ಮುಂದಿನ ಸಭೆಗಳಿಗೆ ನಾವು ಹಾಜರಾಗುವುದಿಲ್ಲ. ನಮ್ಮ ಸಮಾಜದ ವ್ಯಾಪ್ತಿಯಲ್ಲೇ ಜಯಂತಿ ಆಚರಣೆ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.
ವಿಶ್ವಕರ್ಮ ಸಮಾಜದ ಅಧ್ಯಕ್ಷ ತಿಪ್ಪೇಸ್ವಾಮಿ, ಮುಖಂಡರಾದ ಶ್ರೀಧರ್, ಹನುಮಂತಪ್ಪ, ಗರಗ ರಾಜಣ್ಣ ಇತರರಿದ್ದರು.