26 ವರ್ಷಗಳಿಂದ ತಲೆಮರೆಸಿಕೊಂಡಿದ್ದವನ ಸೆರೆ

web 1
Published on

ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ನ್ಯಾಯಾಲಯಕ್ಕೂ ಗೈರು

ಚಿಂತಾಮಣಿ: ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ದೀರ್ಘ ಕಾಲದಿಂದ ತಲೆಮರೆಸಿಕೊಂಡಿದ್ದ ಕಳವು ಆರೋಪಿಯನ್ನು ಶ್ರೀನಿವಾಸಪುರ ಠಾಣೆ ಪೊಲೀಸರು ಎರಡು ದಿನಗಳ ಹಿಂದೆ ಬಂಧಿಸಿದ್ದಾರೆ.

ಚಿಂತಾಮಣಿ ತಾಲೂಕಿನ ಸಿದ್ದೇಪಲ್ಲಿ ಕ್ರಾಸ್‌ನ ನಿವಾಸಿ ರಾಮಾಂಜಿ ಬಂಧಿತ.

ಊರೂರು ತಿರುಗಿ ಪಾತ್ರೆ ಮಾರಾಟ ಮಾಡುತ್ತಿದ್ದ ರಾಮಾಂಜಿ, ಮಾರಾಟ ನೆಪದಲ್ಲಿ ಕಳ್ಳತನ ಮಾಡುತ್ತಿದ್ದ. ಇದುವರೆಗೂ 10ಕ್ಕೂ ಹೆಚ್ಚು ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಈತ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ, ಪೊಲೀಸರಿಗೂ ಸಿಗದೆ 26 ವರ್ಷಗಳಿಂದ ತಲೆಮರೆಸಿಕೊಂಡಿದ್ದ.

ಮುಳಬಾಗಿಲು ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಶ್ರೀ ನರಸಿಂಹ ತೀರ್ಥದ ಬಳಿಯಿರುವ ಸಿದ್ಧಾರ್ಥ ನಗರದಲ್ಲಿ ಆರೋಪಿ ಇರುವ ಖಚಿತ ಮಾಹಿತಿ ಪಡೆದ ಶ್ರೀನಿವಾಸಪುರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ವಿದ್ಯುತ್ ತಂತಿ ಕಳವು ಸೇರಿ ಹಲವಾರು ಪ್ರಕರಣಗಳು ಈತನ ವಿರುದ್ಧ ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಮುಳಬಾಗಿಲು ಡಿವೈಎಸ್‌ಪಿ ನಂದಕುಮಾರ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net