

ವಿಜಯಪುರ: ವಕ್ಫ್ ಹಟಾವೋ-ದೇಶ ಬಚಾವೋ ಘೋಷ ವಾಕ್ಯದಡಿ ಕಳೆದ ನಾಲ್ಕು ದಿನಗಳಿಂದ ತಾರಕಕೇರಿದ್ದ ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದ ಸ್ಥಳಕ್ಕೆ ಭೇಟಿ ನೀಡಿದ ಕೇಂದ್ರ ಜಂಟಿ ಸಂಸದೀಯ ಸಮಿತಿ ಅಧ್ಯಕ್ಷ ಜಗದಾಂಬಿಕಾ ಪಾಲ್‌ಗೆ ಮನವಿ ಸಲ್ಲಿಸಿರುವ ರೈತರು ಹಾಗೂ ಮಠಧೀಶರು ದೇಶಕ್ಕೆ ಮಾರಕವಾಗಿರುವ ವಕ್ಫ್ ಕಾಯ್ದೆಯನ್ನೇ ತೆಗೆದು ಹಾಕಿ ಅದರ ಆಸ್ತಿಗಳನ್ನು ರಾಷ್ಟ್ರೀಕರಣಗೊಳಿಸಬೇಕೆಂದು ಆಗ್ರಹಿಸಿದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳರಾದಿಯಾಗಿ ನೂರಾರು ರೈತರು ಮತ್ತು ಮಠಾಧೀಶರ ನೇತೃತ್ವದಲ್ಲಿ ನಡೆಯುತ್ತಿರುವ ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿಯ ನಾಲ್ಕನೇ ದಿನವಾದ ಗುರುವಾರದಂದು ಕೇಂದ್ರ ಜಂಟಿ ಸಂಸದೀಯ ಸಮಿತಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಹಾಗೂ ಸದಸ್ಯ ತೇಜಸ್ವಿ ಸೂರ್ಯ ಭೇಟಿ ನೀಡಿ ಅಹವಾಲು ಹಾಗೂ ಮನವಿಗಳನ್ನು ಸ್ವೀಕರಿಸಿದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮನವಿ ಪ್ರತಿ ಸಲ್ಲಿಸುತ್ತಾ, ಕರಾಳ ವಕ್ಫ್ ಕಾಯ್ದೆಯಿಂದಾಗಿ ಕರ್ನಾಟಕದ ರೈತರಿಗೆ ಾವು ಬದುಕಿನ ಪ್ರಶ್ನೆ ಎದುರಾಗಿದೆ. ವಕ್ಫ್ ಹೆಸರಲ್ಲಿ ಮಠ-ಮಾನ್ಯಗಳು, ಸರ್ಕಾರಿ ಜಮೀನು, ರೈತರ ಆಸ್ತಿಗಳನ್ನು ಸಹ ಕಬಳಿಸಲಾಗುತ್ತಿದೆ ಎಂದರು.
ಡಾ.ಅಂಬೇಡ್ಕರ್ ಅವರು ನೀಡಿದ ಸಂವಿಧಾನದಲ್ಲಿ ವಕ್ಫ್ ಪದವೇ ಇರಲಿಲ್ಲ. ಜವಾಹರಲಾಲ ನೆಹರು ಅವರು ಪ್ರಧಾನಿಯಾದ ಬಳಿಕ ಈ ಕಾನೂನು ತಂದರು. ಆಗ ದೇಶದಲ್ಲಿ ಸಾವಿರ ಸಂಖ್ಯೆಯಲ್ಲಿದ್ದ ವಕ್ಫ್ ಆಸ್ತಿಗಳು ಈಗ 9.5 ಲಕ್ಷ ತಲುಪಿದೆ. ಒಟ್ಟು 38 ಲಕ್ಷ ಎಕರೆ ಜಮೀನು ವಕ್ಪ್ ಹೆಸರಲ್ಲಿದೆ. ಸೈನ್ಯ ಹಾಗೂ ರೈಲ್ವೆ ಇಲಾಖೆ ನಂತರದ ದೊಡ್ಡ ಆಸ್ತಿ ವಕ್ಪ್‌ಗೆ ಇದೆ. ಇದೆಲ್ಲ ಯಾರು ದಾನ ಮಾಡಿದರು? ಎಷ್ಟು ಜನ ಕೊಟ್ಟಿದ್ದಾರೆ? ಹೇಗೆ ಬಂತು? ಎಂದರು.
ಜಮೀರ್ ಅಹ್ಮದ್ ವಕ್ಫ್ ಸಚಿವರಾದ ಬಳಿಕ ಅದಾಲತ್‌ನಡೆಸಿ ಎಲ್ಲ ಅಧಿಕಾರಿಗಳಿಗೆ ಧಮ್ಕಿ ನೀಡಿ ಎಲ್ಲ ಆಸ್ತಿ ವಕ್ಫ್‌ಗೆ ಸೇರಿಸಿ ಎಂದ ಪರಿಣಾಮ ಅನೇಕ ರೈತರಿಗೆ ನೋಟಿಸ್ ನೀಡಲಾಗಿದೆ. ಚಾಲುಕ್ಯ ಕಾಲದ ಮಂದಿರ ಸಹ ಬಿಟ್ಟಿಲ್ಲ. ಹೀಗಾಗಿ ಈ ಕಾಯ್ದೆಯನ್ನೇ ತೆಗೆದು ಹಾಕಬೇಕೆಂದರು.
ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ನಾಲ್ಕು ದಿನಗಳಿಂದ ಕರ್ನಾಟಕದ ರೈತರು, ಮಠ ಮಂದಿರಗಳ ಸ್ವಾಮೀಜಿ ರೈತರ ಜೊತೆಗೆ ಆಂದೋಲನ ನಡೆಸಲಾಗಿದೆ. ವಕ್ಫ್ ಸಂಪತ್ತು ರಾಷ್ಟ್ರೀಕರಣ ಆಗಬೇಕೆಂಬುದೇ ನಮ್ಮ ಏಕೈಕ ಬೇಡಿಕೆಯಾಗಿದೆ ಎಂದರು,
ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ವಕ್ಫ್ ನ ಅವಶ್ಯಕತೆ ಯಾರಿಗೂ ಇಲ್ಲ. ವಕ್ಫ್‌ನಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಇದಕ್ಕೆ ಹೊಣೆ ಯಾರು? ನಮ್ಮ ಸಮಸ್ಯೆ ಕೇಳಲು ಈ ದೇಶದಲ್ಲಿ ಯಾರೂ ಇಲ್ಲವಾ? ಕೂಡಲೇ ಈ ಕಾಯ್ದೆ ತೆಗೆದು ಹಾಕಿ ಎಂದರು.
ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ರೈತರ ಭೂಮಿಗೆ ಮಾರಣಾಂತಿಕವಾಗಿ ಕಾಡುತ್ತಿರುವ ಈ ಕಾಯ್ದೆಯನ್ನು ಕಿತ್ತು ಹಾಕಬೇಕೆಂದು ಮನವಿ ನೀಡಲಾಗುತ್ತಿದ್ದು ಇದನ್ನು ವರದಿ ಮೂಲಕ ಸರ್ಕಾರಕ್ಕೆ ನೀಡಬೇಕೆಂದರು.
ಕನ್ಹೇರಿಯ ಅದಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಐದು ಶಾಹಿ ಸುಲ್ತಾನರಿಂದ ಶೋಷಿತವಾದ ಜಿಲ್ಲೆಗಳಲ್ಲಿ ಈಗಲೂ ವಕ್ಫ್ ಮೂಲಕ ಶೋಷಣೆ ಮುಂದುವರಿದಿದೆ. ಅಂದು ಹಿಂದು ರಾಜ ಬಹಮನಿ ಗಂಗರಸನನ್ನು ಮುಸ್ಲಿಂಗೆ ಮತಾಂತರವಾಗಿಸಿದಲಾಯಿತು. ಇದೀಗ ಹಿಂದು ಮಂದಿರ ಮಠ-ಮಾನ್ಯಗಳನ್ನು ವಕ್ಫ್‌ಗೆ ಸೇರ್ಪಡೆಗೊಳಿಸಲಾಗುತ್ತಿದೆ. ನಾವು ಧರಿಸುವ ಅಂಗಿ ಕೆಲವು ಕಡೆ ಹಾನಿಯಾಗಿದ್ದರೆ ಹೇಗೋ ಹೊಲಿದುಕೊಂಡು ಮತ್ತೆ ಬಳಸಬಹುದು, ಆದರೆ ನೂರಾರು ಕಡೆ ಹರಿದಿದ್ದರೆ ಹೊಲಿಯುವುದು ಹೇಗೆ? ಅಂಗಿಯನ್ನೇ ಬದಲಿಸಬೇಕಲ್ಲವೇ? ಹಾಗೆಯೇ ವಕ್ಫ್ ಕಾಯ್ದೆಯೂ ಸಂಪೂರ್ಣ ದೋಷಪೂರಿತ ಅಂಗಿಯಾಗಿದ್ದು ಅದನ್ನು ತೆಗೆದು ಹಾಕಬೇಕೆಂದರು.
ರೈತರ ಪ್ರತಿನಿಧಿಯಾಗಿ ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಭೀಮಸೇನ ಕೊಕರೆ ಹಾಗೂ ರೈತ ಗುರುನಾಥ ಬಗಲಿ ಸಮಸ್ಯೆ ಹೇಳಿಕೊಂಡರು.
ಶಾಸಕ ರಮೇಶ ಜಾರಕಿಹೊಳಿ, ಅಣ್ಣಾಸಾಹೇಬ ಜೊಲ್ಲೆ, ಶಶಿಕಲಾ ಜೊಲ್ಲೆ, ಮಾಜಿ ಸಚಿವರಾದ ಎಸ್.ಕೆ. ಬೆಳ್ಳುಬ್ಬಿ, ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಆರ್.ಎಸ್. ಪಾಟೀಲ್ ಕುಚಬಾಳ, ವಿಜುಗೌಡ ಪಾಟೀಲ, ದಯಾಸಾಗರ ಪಾಟೀಲ, ಉಮೇಶ ಕೋಳಕೂರ, ಕಾಸುಗೌಡ ಬಿರಾದಾರ ಮತ್ತಿತರರಿದ್ದರು. ಜಂಟಿ ಸಂಸದೀಯ ಸಮಿತಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರು ವರದಿಯಲ್ಲಿ ಆಂದೋಲನ ಮತ್ತು ರೈತರ ಸಮಸ್ಯೆ ಉಲ್ಲೇಖಿಸುವುದಾಗಿ ಭರವಸೆ ನೀಡಿದ ಹಿನ್ನೆಲೆ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಅಂತ್ಯಗೊಳಿಸುತ್ತಿರುವುದಾಗಿ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.