ವಕ್ಫ್ ಕುರಿತು ಸಮಸ್ಯೆ ಆಲಿಕೆ, ಪಾರದರ್ಶಕ ಕಾಯ್ದೆಗಾಗಿ ಪ್ರಾಮಾಣಿಕ ವರದಿ ಸಲ್ಲಿಸುವೆ ಎಂದ ಜಗದಾಂಬಿಕಾ ಪಾಲ್

JAGADAMBIKA PAL
ವಿಜಯಪುರ ಜಿಲ್ಲಾಡಳಿತ ಕಚೇರಿ ಎದುರು ನಡೆಯುತ್ತಿರುವ ಅಹೋರಾತ್ರಿ ಅನಿದಿಷ್ಟಾವಧಿ ಧರಣಿ ಸತ್ಯಾಗ್ರಹದ ಸ್ಥಳಕ್ಕೆ ಭೇಟಿ ನೀಡಿ ಕೇಂದ್ರ ಜಂಟಿ ಸಂಸದೀಯ ಸಮಿತಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಮಾತನಾಡಿದರು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಶಾಸಕ ಬಸನಗೌಡ ಪಾಟೀಲ ಯತ್ನಾಳ, ಬಸವಜಯ ಮೃತ್ಯುಂಜಯ ಸ್ವಾಮೀಜಿ ಮತ್ತಿತರರಿದ್ದಾರೆ.
Published on

ವಿಜಯಪುರ: ರೈತರ ಜಮೀನು, ಸರ್ಕಾರ ಆಸ್ತಿ, ಐತಿಹಾಸಿಕ ಸ್ಮಾರಕಗಳು, ಹಿಂದು ದೇವಾಲಯಗಳು, ಮಠ-ಮಾನ್ಯಗಳನ್ನು ಸಹ ವಕ್ಫ್‌ಗೆ ಸೇರ್ಪಡೆ ಮಾಡಿರುವ ಬಗ್ಗೆ ರೈತರು ಮತ್ತು ಮಠಾಧೀಶರುಗಳಿಂದ ಮನವಿ ಸಲ್ಲಿಕೆಯಾಗಿದ್ದು, ಈ ಎಲ್ಲ ಅಹವಾಲು, ಬೇಡಿಕೆ ಹಾಗೂ ಮನವಿಗಳನ್ನು ಪ್ರಾಮಾಣಿಕವಾಗಿ ವರದಿಯಲ್ಲಿ ಉಲ್ಲೇಖಿಸುವ ಮೂಲಕ ಕೇಂದ್ರ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ವಕ್ಫ್ ತಿದ್ದುಪಡಿ ಕಾಯ್ದೆ-2024ರ ಪಾರದರ್ಶಕವಾಗಿರುವಂತೆ ನೋಡಿಕೊಳ್ಳುವುದಾಗಿ ಕೇಂದ್ರದ ಜಂಟಿ ಸಂಸದೀಯ ಸಮಿತಿ ಅಧ್ಯಕ್ಷ ಜಗದಾಂಬಿಕಾ ಪಾಲ್ ತಿಳಿಸಿದರು.

ವಕ್ಫ್ ಹಟಾವೋ-ದೇಶ ಬಚಾವೋ ಘೋಷ ವಾಕ್ಯದಡಿ ಇಲ್ಲಿನ ಜಿಲ್ಲಾಡಳಿತ ಕಚೇರಿ ಎದುರು ನಡೆಯುತ್ತಿರುವ ಅಹೋರಾತ್ರಿ ಅನಿದಿಷ್ಟಾವಧಿ ಧರಣಿ ಸತ್ಯಾಗ್ರಹದ ಸ್ಥಳಕ್ಕೆ ಭೇಟಿ ನೀಡಿ ರೈತರು, ಮಠಾಧೀಶರಿಂದ ಮನವಿ ಸ್ವೀಕರಿಸಿ ಅವರು ಮಾತನಾಡಿದರು.

ಕೇಂದ್ರದಲ್ಲಿ ವಕ್ಫ್ ಕಾಯ್ದೆಗೆ ತಿದ್ದುಪಡಿ ತರುವ ನಿಟ್ಟಿನಲ್ಲಿ ಜಂಟಿ ಸಂಸದೀಯ ಸಮಿತಿ ರಚಿಸಲಾಗಿದೆ. ಸಮಿತಿಯಲ್ಲಿ ಚರ್ಚೆಗಳು ನಡೆದಿರುವಾಗಲೇ ಇತ್ತ ಕರ್ನಾಟಕ ಮತ್ತಿತರ ರಾಜ್ಯಗಳಲ್ಲಿ ಸರ್ಕಾರಿ ಆಸ್ತಿಗಳನ್ನು, ಸಾರ್ವಜನಿಕರ ಜಮೀನು, ಮಠ-ಮಾನ್ಯಗಳು ಹಾಗೂ ಐತಿಹಾಸಿಕ ಸ್ಮಾರಕಗಳನ್ನು ವಕ್ಫ್‌ಗೆ ಸೇರ್ಪಡೆಗೊಳಿಸಿರುವುದು ಕಂಡು ಬಂದಿದೆ. ಕೆಲವೊಂದು ಊರುಗಳೇ ವಕ್ಫ್‌ಗೆ ಸೇರ್ಪಡೆಯಾಗಿವೆ. ಅನೇಕ ದಶಕಗಳಿಂದ ಉಳುಮೆ ಮಾಡುತ್ತಿರುವ ರೈತರಿಗೆ ವಕ್ಫ್ ನೋಟಿಸ್ ನೀಡಲಾಗಿದೆ. ನಾನು ಉಳಿದ ಸದಸ್ಯರ ಜೊತೆ ಆಗಮಿಸಿಲ್ಲ ಎಂದು ಕಾಂಗ್ರೆಸ್ ಸರ್ಕಾರದವರು ಕೇಳುತ್ತಿದ್ದಾರೆ, ನನ್ನನ್ನು ಪ್ರಶ್ನೆ ಮಾಡುವ ಮೊದಲು ನೀವು ನೋಟಿಸ್ ನೀಡುವ ಅವಶ್ಯಕತೆ ಏನಿತ್ತು? ಜನರ ಆತಂಕ ನಿವಾರಣೆಯ ಹೊಣೆಗಾರಿಕೆ ರಾಜ್ಯ ಸರ್ಕಾರದಲ್ಲವೇ? ಎಂದರು.

ಇಂಡಿ ತಾಲೂಕಿನ ರೈತರ ಉದಾಹರಣೆ ಉಲ್ಲೇಖಿಸಿದ ಅವರು, ‘ನನಗೆ ಮಲ್ಲಿಕಾರ್ಜುನ ಎಂಬ ರೈತ ಭೇಟಿ ಮಾಡಿ ತನ್ನ ಜಮೀನು ದಾಖಲೆಯಲ್ಲಿ ವಕ್ಫ್ ಎಂದು ನಮೂದಿಸಿದ್ದಾರೆ. ನನಗೆ ಓದಲು ಬರುವುದಿಲ್ಲ, ಆದರೆ ಅನೇಕ ದಶಕಗಳಿಂದ ಈ ಭೂಮಿ ಉಳುಮೆ ಮಾಡುತ್ತಿದ್ದೇನೆ, ಈಗ ವಕ್ಫ್ ಎನ್ನುತ್ತಿದ್ದಾರೆ’ ಎಂದು ಅಳಲು ತೋಡಿಕೊಂಡ. ಇದು ಒಬ್ಬ ಮಲ್ಲಿಕಾರ್ಜುನ ಸಮಸ್ಯೆಯಲ್ಲ, ಸಾವಿರಾರು ರೈತರಲ್ಲಿ ಆತಂಕ ಎದುರಾಗಿದೆ, ಈ ಆತಂಕಕ್ಕೆ ಯಾರು ಹೊಣೆ? ಇದು ಒಬ್ಬ ರೈತನ ಪ್ರಶ್ನೆ ಅಲ್ಲ, ಸಾವಿರಾರು ರೈತರ ಸಮಸ್ಯೆಯಾಗಿದ್ದರಿಂದ ಇಲ್ಲಿಗೆ ಧಾವಿಸಿ ಬಂದಿರುವುದಾಗಿ ತಿಳಿಸಿದರು.

ಪಾರದರ್ಶಕ ರೀತಿಯಲ್ಲಿ ಕಾಯ್ದೆ ರೂಪಿಸಲು ಈ ಸಂಸದೀಯ ಸಮಿತಿ ರಚನೆಯಾಗಿದೆ. ಯಾರು ಮುತವಲ್ಲಿ ಅವರ ಹತ್ತಿರದವರು ಜಮೀನು ಕಬಳಿಕೆ ಮಾಡಿದ್ದಾರೋ ಅಥವಾ ದುರಪಯೋಗ ಮಾಡಿದ್ದಾರೋ ಎಂಬ ಅಂಶವನ್ನೂ ಪರಿಶೀಲನೆ ಮಾಡುತ್ತೇವೆ. ಭವಿಷ್ಯದಲ್ಲಿ ವಕ್ಫ್ ಆಸ್ತಿ ಮಾರಾಟವಾಗದಂತೆ ಅದನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಈ ಹೆಜ್ಜೆ ಇರಿಸಲಾಗಿದೆ. ಓವೈಸಿ ಸೇರಿದಂತೆ ಎಲ್ಲರೂ ಈ ಸಮಿತಿಯಲ್ಲಿ ಇದ್ದಾರೆ, ದಿನವೂ ಚರ್ಚೆ ಅಭಿಪ್ರಾಯ ಆಧರಿಸಿ ಸಮಿತಿ ಅಧ್ಯಯನ ನಡೆಸುತ್ತಿದೆ. ಪರಿಸ್ಥಿತಿ ಹೀಗಿರುವಾಗ ಕರ್ನಾಟಕದಲ್ಲಿ ಈ ವಿದ್ಯಮಾನದ ಅಗತ್ಯವೇನಿತ್ತು? ಈ ವಿದ್ಯಮಾನದ ಅವಧಿಯಲ್ಲಿ ಶೇ. 38 ರಷ್ಟು ಹೆಚ್ಚಿನ ನೋಟಿಸ್ ನೀಡಲಾಗಿದೆ ಎಂದರು.

ಈಗಾಗಲೇ ವಕ್ಫ್‌ಗೆ ಸಂಬಂಧಿಸಿದಂತೆ ಅಭಿಪ್ರಾಯ ಮತ್ತು ಅಹವಾಲು ಸಲ್ಲಿಸಲು ಪೊರ್ಟಲ್ ತೆರೆಯಲಾಗಿದೆ. ಒಂದು ಕೋಟಿ ಅಹವಾಲು ದಾಖಲಾಗಿವೆ. ಮಲೇಷಿಯಾದಲ್ಲಿ ಕುಳಿತ ಝಾಕೀರ್ ನಾಯಕ ಈ ಪೋರ್ಟಲ್‌ನಲ್ಲಿ ಅಭಿಪ್ರಾಯ ದಾಖಲಿಸಿ ಎಂದು ಕರೆ ನೀಡಿದ್ದಾನೆ. ಇನ್ನು ಕರ್ನಾಟಕ ಸೇರಿದಂತೆ ಅನೇಕ ಕಡೆ ಅಹವಾಲು ಸಲ್ಲಿಕೆಯಾಗುತ್ತಿವೆ. ಸ್ವತಃ ಕೇಂದ್ರ ಸಚಿವೆ ಶೋಭಾ ಅವರು ಧರಣಿಯಲ್ಲಿರುವುದನ್ನು ಗಮನಿಸಿದೆ, ರೈತರ ಸಾವು ಬದುಕಿನ ಪ್ರಶ್ನೆಯಾಗಿರುವುದರಿಂದ ನಾನು ಸಹ ಧರಣಿಯಲ್ಲಿ ಕುಳಿತಿರುವೆ ಎಂದು ಕೇಂದ್ರ ಸಚಿವೆ ಶೋಭಾ ಕರದ್ಲಾಂಜೆ ಹೇಳಿದ್ದಾರೆ. ಎಷ್ಟು ಗಂಟೆ ಪ್ರಯಾಣ ಮಾಡಿದರೂ ಚಿಂತೆಯಿಲ್ಲ, ವಿಜಯಪುರಕ್ಕೆ ಭೇಟಿ ಮಾಡಲೇಬೇಕು ಎಂಬ ಸಂಕಲ್ಪದೊಂದಿಗೆ ಇಲ್ಲಿಗೆ ಬಂದಿದ್ದೇನೆ ಎಂದರು.

ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಮೋದಿ ಸರ್ಕಾರ ವಕ್ಫ್ ವಿವಾದಕ್ಕೆ ಫುಲ್ ಸ್ಟಾಪ್ ಇಡಲು ಪರಿಮಿತ ಅಧಿಕಾರವನ್ನು ತೆಗೆದು ಹಾಕಲಿದೆ. ಈ ಬಗ್ಗೆ ಕಮೀಟಿಯಲ್ಲೂ ಆಗ್ರಹಿಸಿದ್ದೇನೆ, ವಕ್ಫ್ ಟ್ರಿಬ್ಯುನಲ್ ಸಹ ಕಿತ್ತುಹಾಕಲು ಆಗ್ರಹಿಸಿದ್ದೇನೆ ಎಂದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಶಾಸಕ ಬಸನಗೌಡ ಪಾಟೀಲ ಯತ್ನಾಳ, ಸಂಸದ ರಮೇಶ ಜಿಗಜಿಣಗಿ, ಶಾಸಕ ರಮೇಶ ಜಾರಕಿಹೊಳಿ, ಅಣ್ಣಾಸಾಹೇಬ ಜೊಲ್ಲೆ, ಶಶಿಕಲಾ ಜೊಲ್ಲೆ, ಮಾಜಿ ಸಚಿವರಾದ ಎಸ್.ಕೆ. ಬೆಳ್ಳುಬ್ಬಿ, ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಆರ್.ಎಸ್. ಪಾಟೀಲ್ ಕುಚಬಾಳ, ವಿಜುಗೌಡ ಪಾಟೀಲ, ದಯಾಸಾಗರ ಪಾಟೀಲ, ಉಮೇಶ ಕೋಳಕೂರ, ಕಾಸುಗೌಡ ಬಿರಾದಾರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net