

ಎಂ.ಎಸ್.ಸಿದ್ದಲಿಂಗೇಶ್ವರ್ ಮಾಗಡಿ
ತಾಲೂಕಿನ ನಾರಸಂದ್ರ ಗ್ರಾಮ ತನ್ನದೇ ಆದ ವೈಶಿಷ್ಟ್ಯತೆ ಹೊಂದಿದೆ. ಮಾಗಡಿಯಿಂದ ಸುಮಾರು 15 ಕಿಮೀ, ರಾಜಧಾನಿಯಿಂದ 50 ಕಿಮೀ ದೂರದಲ್ಲಿರುವ ಈ ಗ್ರಾಮ ಕುದೂರು ಹೋಬಳಿ ವ್ಯಾಪ್ತಿಗೆ ಸೇರುತ್ತದೆ. 600 ವರ್ಷಗಳ ಇತಿಹಾಸ ಹೊಂದಿದ್ದು, ಒಂದೂವರೆ ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ.
ವಿವಿಧ ಸಮುದಾಯದ ಜನರ ವಾಸವಿದ್ದು, ಬದುಕಲು ಕುಲಕಸುಬು ಆಶ್ರಯಿಸಿದ್ದಾರೆ. ಮನೆಗೊಬ್ಬರು ಚಾಲಕರು, ಕಂಡಕ್ಟರ್ ಇರುವ ತಾಲೂಕಿನ ಏಕೈಕ ಗ್ರಾಮ ಇದಾಗಿದೆ. ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿರುವ ಈ ಗ್ರಾಮ ಪದೇಪದೆ ರಸ್ತೆ ವಿಸ್ತರಣೆಯಿಂದಾಗಿ ಹೆದ್ದಾರಿ ಪಕ್ಕದಲ್ಲಿ ವಾಸವಿದ್ದವರು ಇಂದು ತೋಟ, ಜಮೀನಿನ ಬಳಿ ಮನೆ ಕಟ್ಟಿಕೊಂಡು ವಾಸಿಸುತ್ತಿದ್ದಾರೆ.
ನಾರಸಂದ್ರ ಗ್ರಾಮ ಮೊದಲು ನಾರಸಮುದ್ರ ಎಂದು ಕರೆಯಲ್ಪಡುತ್ತಿತ್ತು. ಕ್ರಮೇಣ ನಾರಸಂದ್ರವಾಗಿ ಬದಲಾಯಿತು. ಕೆಂಪೇಗೌಡರ ಕಾಲದಲ್ಲಿ ವಿವಿಧ ಹೂವುಗಳನ್ನು ಬೆಳೆದು ಗ್ರಾಮಸ್ಥರು ಶಿವಗಂಗೆಯ ಗಂಗಾಧರೇಶ್ವರ ದೇವಾಲಯಕ್ಕೆ ನೀಡುತ್ತಿದ್ದರು ಎಂಬ ಮಾತು ಇಂದಿಗೂ ಜೀವಂತಗಾಗಿದೆ. ಇದಕ್ಕೆ ಉದಾಹರಣೆ ಎನ್ನುವಂತೆ ಕೃಷ್ಣ, ಸ್ವಾಮಿ, ರಾಜಣ್ಣ ಎಂಬುವರ ಕುಟುಂಬಗಳು ಇಂದಿಗೂ ಹೂವು ಕಟ್ಟುವ ಕಾಯಕ ಮಾಡುತ್ತಿವೆ.
ಗ್ರಾಮದ ಬಸಪ್ಪ ಶಾಸಿ ಎಂಬುವರು 19ನೇ ವರ್ಷದಲ್ಲೇ ಗ್ರಂಥ ರಚನೆ ಮಾಡಿ ಮೈಸೂರು ಮಹಾರಾಜರ ಮೆಚ್ಚುಗೆಗೆ ಪಾತ್ರರಾಗಿದ್ದರು. 1843ರ ಮೇ24 ರಂದು ಜನಿಸಿದ ಬಸವಪ್ಪಶಾಸ್ತ್ರಿ ಅವರು ಚಿಕ್ಕಂದಿನಲ್ಲೇ ತಂದೆ-ತಾಯಿಯನ್ನು ಕಳೆದು ಕೊಂಡರು. ಇವರ ಕುಟುಂಬದವರು ಮೈಸೂರು ಅರಮನೆಯ ಅರ್ಚಕ ವೃಂದದಲ್ಲಿ ಒಂದಾಗಿದ್ದ ಕಾರಣ ಬಸಪ್ಪಶಾಸ್ತ್ರಿ ಹೆಚ್ಚು ದಿನ ಅರಮನೆಯಲ್ಲೇ ಕಳೆಯುತ್ತಿದ್ದರು.
ಆಸ್ಥಾನ ಕವಿಯಾಗಿ, ರಾಜಗುರುವಾಗಿ, ರಾಜಪುರೋಹಿತರಾಗಿ, ಭಾಷಾಂತರಕಾರರಾಗಿ ಕಾಳಿದಾಸನ ಸಂಸ್ಕೃತ ಪುಸ್ತಕಗಳನ್ನು ಕನ್ನಡಕ್ಕೆ ರೂಪಾಂತರಗೊಳಿಸಿ ಕರ್ನಾಟಕ ಅಭಿನವ ಕಾಳಿದಾಸ ಎಂಬ ಬಿರುದಿಗೆ ಪಾತ್ರರಾಗಿದ್ದರು. ನಾರಸಂದ್ರದಲ್ಲಿ ಇಂದಿಗೂ ಇವರ ವಂಶಸ್ಥರ ಜಾಗವಿದ್ದು ಎಲ್ಲವೂ ಒತ್ತುವರಿಯಾಗಿದೆ ಎನ್ನಲಾಗಿದೆ. ಗ್ರಾಮದ ರುದ್ರಾಕ್ಷಿ ಮಠದ ಎದುರು ಕಲ್ಲಿನ ಕಂಬದ ಸಾಲು ಮಂಟಪ ಇದ್ದು ಇದನ್ನೇ ಬಸಪ್ಪ ಶಾಸ್ತ್ರಿಗಳ ನೆನಪಿನ ಮಂಟಪವಾಗಿ ಗುರುತಿಸಲಾಗುತ್ತಿದೆ.
ಗ್ರಾಮದಲ್ಲಿ ಗಾಣಿಗ ಸಮುದಾಯ ಕಲ್ಲಿನ ಗಾಣದಿಂದ ಹರಣೆಳ್ಳೆ, ಹುಚ್ಚೆಳ್ಳೆಣ್ಣೆ, ಹೊಂಗೆ, ಕಡಲೆಕಾಯಿ ಎಣ್ಣೆ ತೆಗೆಯುತ್ತಿದ್ದರು. ಈಗ ನಾಗರಿಕತೆ ಬದಲಾದಂತೆ ಗಾಣದಿಂದ ಎಣ್ಣೆ ತಯಾರಿಸುವುದು ಹಿನ್ನೆಲೆಗೆ ಸರಿದಿದೆ. ಆದರೆ, ಅಂದು ಬಳಸುತ್ತಿದ್ದ ಗಾಣಗಳಿಗೆ ಸಮುದಾಯದವರು ಇಂದಿಗೂ ಪೂಜೆ ಸಲ್ಲಿಸುವುದು ವಿಶೇಷ.
ಗ್ರಾಮದೇವತೆ ಕರಡಿ ಗುಚ್ಚಮ್ಮ, ಆಂಜನೇಯ, ಲಟಿಕೆ ಶ್ರೀರಂಗನಾಥ, ಬಸವೇಶ್ವರ ದೇವಾಲಯ, ಗಣೇಶ ದೇವಾಲಯ, ಸಾಯಿಬಾಬಾ ದೇವಾಲಯ, ಕೋಡಿ ಬಸವಣ್ಣ, ಮುತ್ತುರಾಯಸ್ವಾಮಿ ದೇವಾಲಯಗಳು ಗ್ರಾಮದಲ್ಲಿರುವ ಹಳೆಯ ದೇವಾಲಯಗಳಾಗಿವೆ. ಪ್ರತಿವರ್ಷ 20 ದಿನ ಕರಡಿ ಗುಚ್ಚಮ್ಮನ ದೇವಿ ಮಹೋತ್ಸವ ನಡೆಯುತ್ತದೆ. ಸುತ್ತಮುತ್ತಲ ಸುಮಾರ 16 ಗ್ರಾಮಗಳಿಂದ 16 ಕುರ್ಜುಗಳು ಉತ್ಸವದಲ್ಲಿ ಪಾಲ್ಗೊಳ್ಳುವುದು ವಿಶೇಷ.
ಗ್ರಾಮದ ರೈತರು ಅಡಕೆ, ತೆಂಗು, ಬಾಳೆ, ದ್ರಾಕ್ಷಿ, ಸಪೋಟ, ರಾಗಿ, ಮೆಣಸು, ಮಾವು, ಹಲಸು, ಏಲಕ್ಕಿ ಬೆಳೆಗಳನ್ನು ಬೆಳೆಯುತ್ತಾರೆ. ಇಂತಹ ಲವತ್ತಾದ ಭೂಮಿಯನ್ನು ಕೈಗಾರಿಕಾ ಪ್ರದೇಶಕ್ಕೆ ಭೂಸ್ವಾಧೀನಪಡಿಸಿಕೊಳ್ಳುವ ಕೆಲಸ ನಡೆಯುತ್ತಿದೆ. ಇದರಿಂದ ಇಲ್ಲಿನ ರೈತರ ನೆಮ್ಮದಿಗೆ ಭಂಗವಾಗಿದೆ. ಗ್ರಾಮದಲ್ಲಿ ಸಿಹಿ ನೀರಿನ ಬಾವಿಯಿದ್ದು, ಗ್ರಾಮಸ್ಥರು ಇದೇ ನೀರು ಬಳಸುತ್ತಿದ್ದರು. ಈ ನೀರನ್ನು ಕುಡಿದರೆ ಯಾವುದೇ ಕಾಯಿಲೆ ಬರುವುದಿಲ್ಲ ಎನ್ನುವುದು ನಂಬಿಕೆ. ಗ್ರಾಮದಲ್ಲಿ ಕೊಳವೆ ಬಾವಿಗಳ ಸಂಖ್ಯೆ ಹೆಚ್ಚಾದಂತೆ ಗಿಡ-ಗಂಟಿಗಳು ಬೆಳೆದು ಈ ಬಾವಿ ಈಗ ಅವಸಾನದ ಅಂಚಿನಲ್ಲಿದೆ.
ಶಿವಪ್ರಸಾದ್
ವಿಶ್ವೇಶ್ವರಯ್ಯ, ಪಟೇಲರು