

ಅಂಕೋಲಾ: ಅಂತಾರಾಷ್ಟ್ರೀಯ ಹಿರಿಯ ವ್ಯಕ್ತಿಗಳ ದಿನದ ಅಂಗವಾಗಿ ಜಿಲ್ಲಾ ಚುನಾವಣಾಧಿಕಾರಿಗಳ ಕಾರ್ಯಾಲಯ ಹಾಗೂ ಜಿಲ್ಲಾ ಸ್ವೀಸ್ ಸಮಿತಿ ವತಿಯಿಂದ ಶನಿವಾರ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅವರು ತಾಲೂಕಿನ ನಾಲ್ವರಿಗೆ ಅಭಿನಂದನಾ ಪತ್ರ ವಿತರಿಸಿ ಗೌರವಿಸಿದರು.
ಪದ್ಮಶ್ರೀ ಪುರಸ್ಕೃತರಾದ ಡಾ. ತುಳಸಿ ಗೌಡ ಹೊನ್ನಳ್ಳಿ, ಸುಕ್ರಿ ಗೌಡ ಬಡಗೇರಿ ಮತ್ತು ಶತಾಯುಷಿ ಬೆಳಂಬಾರ ತಾಳೇಬೈಲ್ ಗ್ರಾಮದ ಮಂಕಾಳಿ ಮಾಣು ಗೌಡ ಹಾಗೂ ಪಾವರ್ತಿ ನಾಯಕ ಅವರಿಗೆ ಅಭಿನಂದನಾ ಪತ್ರ ವಿತರಿಸಿದರು.
ಬಳಿಕ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಮಾತನಾಡಿ, ಅಂಕೋಲಾ ತಾಲೂಕಿನಲ್ಲಿ ಇಬ್ಬರು ಪದ್ಮಶ್ರೀ ಪುರಸ್ಕೃತರಿಗೆ ಸನ್ಮಾನಿಸಿ ಗೌರವಿಸುವ ಭಾಗ್ಯ ನನ್ನದಾಗಿರುವುದು ಖುಷಿ ತಂದಿದೆ. ಇಂದು ಅಭಿನಂದನಾ ಪತ್ರ ಪಡೆದುಕೊಂಡವರೆಲ್ಲರೂ ದೇಶದ ಚುನಾವಣಾ ಪ್ರಕ್ರಿಯೆಯಲ್ಲಿ ನಿರಂತರ ಕೊಡುಗೆ ಮತ್ತು ಭಾರತದ ಪ್ರಜಾಪ್ರಭುತ್ವವನ್ನು ಬಲಪಡಿಸಿ, ದೇಶದ ಯುವಕರಿಗೆ ಮಾದರಿಯಾಗಿದ್ದೀರಿ ಎಂದರು.
ಶಾಸಕ ಸತೀಶ ಸೈಲ್ ಮಾತನಾಡಿ, ಚುನಾವಣೆ ಮತದಾನದ ವೇಳೆ ಹಿರಿಯ ನಾಗರಿಕರು ಭಾಗವಹಿಸುವಿಕೆ ಖಚಿತಪಡಿಸಿಕೊಳ್ಳಲು ಚುನಾವಣೆ ಆಯೋಗವು ಗಾಲಿ ಖುರ್ಚಿಗಳು, ಇಳಿಜಾರು ವ್ಯವಸ್ಥೆ (ರ್ಯಾಂಪ್)ಗಳು, ಉಚಿತ ಸಾರಿಗೆ ಹಾಗೂ ಸರತಿ ಸಾಲಿನಲ್ಲಿ ಕಾಯದೆ ನೇರ ಮತದಾನದಂತಹ ಹಲವಾರು ಸೌಲಭ್ಯ ಹೊರತಂದಿದೆ ಎಂದರು.
ತಹಸೀಲ್ದಾರ್ ಅಶೋಕ ಎನ್. ಭಟ್, ಶಿರಸ್ತೇದಾರ ಗಿರೀಶ ಜಾಂಬಳೇಕರ್, ಗ್ರಾಮ ಲೆಕ್ಕಿಗ ಭಾರ್ಗವ ನಾಯಕ, ಅಗಸೂರು ಗ್ರಾಪಂ ಅಧ್ಯಕ್ಷೆ ನಿರ್ಮಲಾ ನಾಯಕ, ಉಪಾಧ್ಯಕ್ಷ ಯಶ್ವಂತ ಟಿ. ಗೌಡ, ಸದಸ್ಯ ಆನಂದು ಗೌಡ, ಮಾಜಿ ಅಧ್ಯಕ್ಷ ರಾಮಚಂದ್ರ ಡಿ.ನಾಯ್ಕ, ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ಗೋಪು ನಾಯಕ ಅಡ್ಲೂರು, ತಾಪಂ ಮಾಜಿ ಅಧ್ಯಕ್ಷೆ ಮಂಜುಳಾ ವೆರ್ಣೆಕರ್, ಸುಬ್ರಾಯ ಎಸ್. ಗೌಡ, ವೆಂಕಮ್ಮಾ ಗೌಡ, ಶೇಖರ ಗೌಡ, ಬಾಬು ಗೌಡ, ಭಾವಿಕೇರಿ ಗ್ರಾಪಂ ಮಾಜಿ ಅಧ್ಯಕ್ಷ ಪಾಂಡು ಗೌಡ, ಜಿಪಂ ಮಾಜಿ ಸದಸ್ಯ ವಿನೋದ ಬಿ. ನಾಯಕ ಬಾಸಗೋಡ, ನಾರಾಯಣ ನಾಯಕ, ಪ್ರಮುಖರಾದ ರಾಮಕೃಷ್ಣ ನಾಯಕ ಭಾವಿಕೇರಿ, ಮಹೇಶ ಗೌಡ ಬಡಗೇರಿ ಇದ್ದರು.