

ಹಾಸನ: ಕಾಡಾನೆ ಉಪಟಳ ಮತ್ತೆ ಹೆಚ್ಚಾಗಿದ್ದು, ಈ ಹಿನ್ನಲೆಯಲ್ಲಿ ಶುಕ್ರವಾರದಿಂದ ಕಾರ್ಯಾಚರಣೆ ಪ್ರಾರಂಭವಾಗಿದೆ. ಈಗಾಗಲೇ ಬೇಲೂರು ತಾಲ್ಲೂಕಿನ, ಬಿಕ್ಕೋಡು ಆನೆ ಕ್ಯಾಂಪ್‌ಗೆ ಸಾಕಾನೆಗಳು ಬಂದಿವೆ. ಗುರುವಾರ (ಜ.11) ಕ್ಯಾಂಪಿಗೆ ಹರ್ಷ, ಸುಗ್ರೀವ, ಧನಂಜಯ, ಅಶ್ವತ್ಥಾಮ, ಪ್ರಶಾಂತ ಆನೆಗಳು ಬಂದಿದ್ದು, ಶುಕ್ರವಾರ ಅಭಿಮನ್ಯು ಸೇರಿದಂತೆ ಕರ್ನಾಟಕ ಭೀಮ, ಮಹೇಂದ್ರ, ಸೇರಿ ಇನ್ನೂ ಕೆಲವು ಸಾಕಾನೆಗಳು ಬರುವ ಬಗ್ಗೆ ವರದಿಯಾಗಿತ್ತು.
ಇದೀಗ ಹಾಸನದ ಕಾಡಿನಲ್ಲಿ ಶನಿವಾರ ಬೆಳಗ್ಗೆಯಿಂದಲೇ ಕ್ಯಾಂಪ್ನಲ್ಲಿ ಅಭಿಮನ್ಯು & ಟೀಮ್ ಕಾರ್ಯಾಚರಣೆಗೆ ಸಜ್ಜಾಗಿವೆ. ಈ ಬಾರಿ 10 ಸಾಕಾನೆ ಬಳಸಿ ಕಾಡಾನೆ ಸೆರೆ ಹಿಡಿಯುವ ಕಾರ್ಯಚರಣೆ ನಡೆಸಲಾಗುತ್ತಿದೆ. ಆದರೆ ಹಾಸನ ಸುತ್ತಮುತ್ತಲಿನ ಜನರು ಇದೀಗ ಕಾಡಿಗೆ ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ಏಕೆಂದರೆ ಈ ಬಾರಿ ದಸರಾ ಆನೆ ಅಭಿಮನ್ಯು ನೇತೃತ್ವದಲ್ಲಿ ಕಾಡಾನೆ ಸೆರೆ ಹಿಡಿಯಲು ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಅರ್ಜುನನ್ನು ನೋಡಲು ಜನ ಬರುತ್ತಿದ್ದಾರೆ.
ಪ್ರತಿಯೊಬ್ಬರು ಅರ್ಜುನನ್ನು ಕೊಲೆಗೈದ ಕಾಡಾನೆಯನ್ನು ಅಭಿಮನ್ಯು ನೇತೃತ್ವದಲ್ಲಿ ಹಿಡಿಯಬೇಕೆಂದು ಬಯಸಿದರೆ, ಇನ್ನು ಮಾವುತರು ಅರ್ಜುನನನ್ನು ಕೊಂದ ಕಾಡನೆಯನ್ನು ಹಿಡಿದು ತಂದು ಅದರ ಮೇಲೆ ಅಂಬಾರಿ ಹೊರಿಸಬೇಕೆಂದು ಶಪಥ ಮಾಡಿದ್ದಾರೆ. ಒಟ್ಟಾರೆ ಪ್ರತಿಯೊಬ್ಬರು ಕ್ಯಾಂಪ್‌ಗೆ ಬಂದು ಅಭಿಮನ್ಯುವನ್ನು ಕಣ್ತುಂಬಿಕೊಳ್ಳಲು ಕಾತುರರಾಗಿರುವುದಂತೂ ಸುಳ್ಳಲ್ಲ.
ಮೂಲಗಳ ಪ್ರಕಾರ ಹಾಸನ ಜಿಲ್ಲೆಯ ನೂತನ ಅರಣ್ಯ ಉಪ ಸಂರಕ್ಷಣಾಧಿಕಾರಿಯಾಗಿ ಸೌರಭ್ ಕುಮಾರ್ ಅವರನ್ನು ನೇಮಕ ಮಾಡಿ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದ್ದು ಅವರ ನೇತೃತ್ವದಲ್ಲಿ ಆನೆ ಸೆರೆ ಕಾರ್ಯಾಚರಣೆ ಆರಂಭವಾಗಲಿದೆ.