ಪೊಲೀಸ್ ಭದ್ರತೆಯಲ್ಲಿ ಕೇರಳಕ್ಕೆ ತೆರಳಿದ ಮದನಿ: ಅನಾರೋಗ್ಯಪೀಡಿತ ತಂದೆಯ ನೋಡಲು ಭೇಟಿ

Madani
Published on

ಬೆಂಗಳೂರು: ಬೆಂಗಳೂರು ಸರಣಿ ಬಾಂಬ್ ಸ್ಫೋಟ ಪ್ರಕರಣದ ರೂವಾರಿ ಮತ್ತು ಪೀಪಲ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮಾಜಿ ಅಧ್ಯಕ್ಷ ಅಬ್ದುಲ್ ನಾಸೀರ್ ಮದನಿ ತನ್ನ ತಂದೆಯ ಅನಾರೋಗ್ಯ ನಿಮಿತ್ತ ಕೇರಳಕ್ಕೆ ತೆರಳಿದ್ದಾನೆ.

ಸೋಮವಾರ ಸಂಜೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೊಚ್ಚಿಗೆ ಪೊಲೀಸ್ ಬಂದೋಬಸ್ತ್‌ನಲ್ಲಿ ಪ್ರಯಾಣ ಬೆಳೆಸಿದ್ದಾನೆ. ಜುಲೈ 7ಕ್ಕೆ ವಾಪಸ್ ಬೆಂಗಳೂರಿಗೆ ಬರುವಂತೆ ಷರತ್ತು ವಿಧಿಸಲಾಗಿದೆ.

2008ರ ಬೆಂಗಳೂರು ಸರಣಿ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಮದನಿ, ಜಾಮೀನು ಪಡೆದರೂ ಬೆಂಗಳೂರು ಬಿಟ್ಟು ಹೊರಗೆ ಹೋಗಲು ಅವಕಾಶ ನೀಡಿರಲಿಲ್ಲ. ತಂದೆಯ ಅನಾರೋಗ್ಯ ಕಾರಣ ಕೇರಳಕ್ಕೆ ಹೋಗಲು ಅವಕಾಶ ನೀಡಬೇಕೆಂದು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದ.

ಇದಕ್ಕೆ ಸಮ್ಮತಿಸಿದ ಕೋರ್ಟ್, 12 ದಿನಗಳ ಕಾಲ ಕೇರಳದಲ್ಲಿ ಪೊಲೀಸ್ ಭದ್ರತೆಯಲ್ಲಿ ವಾಸ್ತವ್ಯ ಹೂಡಲು ಅವಕಾಶ ನೀಡಿದೆ. ಈ ಹಿನ್ನೆಲೆಯಲ್ಲಿ ಓರ್ವ ಆರ್‌ಎಸ್‌ಐ, ಮೂವರು ಕಾನ್‌ಸ್ಟೆಬಲ್‌ಗಳು ಮತ್ತು ಚಾಲಕನನ್ನು ನಿಯೋಜಿಸಿದ್ದು, 12 ದಿನಗಳ ಕಾಲ ಇವರಿಗೆ ತಗಲುವ ವೇತನ, ಖರ್ಚು-ವೆಚ್ಚ ಸೇರಿಸಿ ಸೇವಾ ಶುಲ್ಕ 6,76,101 ರೂ. ರಾಜ್ಯ ಸರ್ಕಾರಕ್ಕೆ ಮುಂಗಡವಾಗಿ ವಸೂಲಿ ಮಾಡಲಾಗಿದೆ ಎಂದು ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net