ಎಬಿಸಿ ಕೇಂದ್ರಕ್ಕೆ ಮರುಜೀವ !: ಪಶುಸಂಗೋಪನಾ ಆಯುಕ್ತರಿಂದ ನಿರ್ವಹಣೆ : ಬೀದಿನಾಯಿಗಳ ಹಾವಳಿ ನಿಯಂತ್ರಣಕ್ಕೆ ಕ್ರಮ

Published on

ಪುರುಷೋತ್ತಮ ಪೆರ್ಲ ಕಾಸರಗೋಡು

ಬೀದಿ ನಾಯಿಗಳ ಸಂತಾನಶಕ್ತಿಹರಣ ಮತ್ತು ದಾಳಿ ತಡೆಗಟ್ಟಲು ಪ್ರಾಣಿ ಕಲ್ಯಾಣ ಇಲಾಖೆ ಮತ್ತು ತ್ರಿಸ್ತರ ಪಂಚಾಯಿತಿಗಳು ಜಂಟಿಯಾಗಿ ಜಾರಿಗೊಳಿಸಿರುವ ಅನಿಮಲ್ ಬರ್ತ್ ಕಂಟ್ರೋಲ್(ಎಬಿಸಿ)ಯೋಜನೆ ಕಾಸರಗೋಡು ಜಿಲ್ಲೆಯಲ್ಲಿ ಮತ್ತೆ ಸಕ್ರಿಯಗೊಂಡಿದೆ.

2016ರಲ್ಲಿ ಎಬಿಸಿ ಕೇಂದ್ರಗಳನ್ನು ಜಿಲ್ಲೆಯಲ್ಲಿ ಸ್ಥಾಪಿಸಲಾಗಿದ್ದು, ಕಾಸರಗೋಡು ರೈಲ್ವೆ ನಿಲ್ದಾಣ ರಸ್ತೆಯ ಪಶುವೈದ್ಯಕೀಯ ಆಸ್ಪತ್ರೆ ಕಟ್ಟಡದಲ್ಲಿ ಮೊದಲು ಕಾರ್ಯಾಚರಣೆ ಆರಂಭಿಸಲಾಗಿತ್ತು. ಮತ್ತೊಂದು ಕೇಂದ್ರವನ್ನು ತ್ರಿಕ್ಕರಿಪುರದಲ್ಲಿ ಆರಂಭಿಸಲಾಗಿದ್ದು, 2023ರಲ್ಲಿ ಎರಡೂ ಕೇಂದ್ರಗಳಲ್ಲಿ ಒಟ್ಟು ಹನ್ನೊಂದು ಸಾವಿರಕ್ಕೂ ಅಧಿಕ ಬೀದಿನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಬಳಿಕ ತಾಂತ್ರಿಕ ಸಮಸ್ಯೆಗಳಿಂದಾಗಿ ಎರಡೂ ಕೇಂದ್ರಗಳ ಕಾರ್ಯಾಚರಣೆ ಸ್ಥಗಿತಗೊಂಡಿದ್ದವು.

ಎಬಿಸಿ ಕೇಂದ್ರದ ಚಟುವಟಿಕೆ ಮತ್ತೊಮ್ಮೆ ಆರಂಭಗೊಂಡಿದ್ದು, ಪಶುಸಂಗೋಪನಾ ಇಲಾಖೆ ನಿರ್ದೇಶನದಂತೆ ತ್ರಿಸ್ತರ ಪಂಚಾಯಿತಿ ಜಂಟಿಯಾಗಿ ಮುಳಿಯಾರಿನಲ್ಲಿ ಹೊಸ ಕೇಂದ್ರ ಆರಂಭಿಸಿದೆ. ಬೀದಿನಾಯಿಗಳನ್ನು ಸೆರೆಹಿಡಿದು ಎಬಿಸಿ ಕೇಂದ್ರಕ್ಕೆ ಕರೆ ತರಲಾಗುತ್ತಿದ್ದು, ರೇಬಿಸ್ ನಿರೋಧಕ ಚುಚ್ಚುಮದ್ದು, ಬಳಿಕ ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ. ಐದುದಿನಗಳ ಕಾಲ ಕೇಂದ್ರದಲ್ಲಿ ಆರೈಕೆ ಮಾಡಿ ಬಳಿಕ ನಾಯಿಗಳನ್ನು ಮರಳಿ ಅವರ ಪ್ರದೇಶಕ್ಕೆ ಕರೆತಂದು ಬಿಡಲಾಗುತ್ತಿದೆ.

ಮುಳಿಯಾರಿನ ಎಬಿಸಿ ಕೇಂದ್ರದಲ್ಲಿ ಏಕಕಾಲಕ್ಕೆ 20 ಶ್ವಾನಗಳಿಗೆ ಶಸ್ತ್ರಚಿಕಿತ್ಸೆ ಕೈಗೊಳ್ಳಲು ಅವಕಾಶವಿದ್ದು, ನೂರು ಶ್ವಾನಗಳ ಆರೈಕೆಗೆ ಗೂಡುಗಳನ್ನು ನಿರ್ಮಿಸಲಾಗುತ್ತಿದೆ. ಪ್ರತಿ ನಾಯಿಯ ಶಸ್ತ್ರಚಿಕಿತ್ಸೆಗೆ 2ಸಾವಿರ ರೂ. ವೆಚ್ಚ ತಗಲುತ್ತಿದೆ. ಮುಳಿಯಾರಿನ ಎಬಿಸಿ ಕೇಂದ್ರದ ಕಾರ್ಯ ಸ್ಥಗಿತಗೊಳಿಸದಂತೆ ಸಾರ್ವಜನಿಕರು ಸ್ಥಳಿಯಾಡಳಿತಕ್ಕೆ ಒತ್ತಾಯಿಸಿದ್ದಾರೆ.

ಶ್ವಾನ ಹತ್ಯೆಗೆ ಕೋರ್ಟ್ ವಿರೋಧ

ಎಬಿಸಿ ಕೇಂದ್ರ ಆರಂಭಗೊಳ್ಳುವುದಕ್ಕೂ ಮೊದಲು ಬೀದಿನಾಯಿಗಳನ್ನು ಸೆರೆಹಿಡಿದು ಅವುಗಳಿಗೆ ವಿಷದ ಚುಚ್ಚುಮದ್ದು ನೀಡಿ ಕೊಲ್ಲಲಾಗುತ್ತಿತ್ತು. ಇದನ್ನು ಪ್ರಾಣಿದಯಾ ಸಂಘ ಹಾಗೂ ನ್ಯಾಯಾಲಯ ವಿರೋಧಿಸಿದ್ದು, ಈ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ಬೀದಿನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸುವುದರ ಜತೆಗೆ ರೇಬಿಸ್ ನಿರೋಧಕ ಚುಚ್ಚುಮದ್ದು ನೀಡಲು ಆದ್ಯತೆ ನೀಡಿತು.

ಮುಳಿಯಾರು ಎಬಿಸಿ ಕೇಂದ್ರ ಪಶುಸಂಗೋಪನಾ ಇಲಾಖೆ ಸಹಾಯಕ ಆಯುಕ್ತರ ಮೇಲ್ನೋಟದಲ್ಲಿ ಕಾರ್ಯಾಚರಿಸಲಿದೆ. ಕೇಂದ್ರದ ಚಟುವಟಿಕೆಯನ್ನು ಏಜನ್ಸಿಯೊಂದಕ್ಕೆ ನೀಡಲಾಗಿದ್ದು, ಒಬ್ಬ ಪಶು ವೈದ್ಯ, ಅಟೆಂಡರ್ ಸೇರಿದಂತೆ ಏಳು ಸಿಬ್ಬಂದಿ ಕರ್ತವ್ಯದಲ್ಲಿರಲಿದ್ದಾರೆ. ಜತೆಗೆ ಮುಳಿಯಾರಿನ ವೆಟರ್ನರಿ ಆಸ್ಪತ್ರೆ ವೈದ್ಯಾಧಿಕಾರಿ ದೈನಂದಿನ ಚಟುವಟಿಕೆ ನಿಗಾ ಇಡಲಿದ್ದಾರೆ.

ಮುಳಿಯರಿನ ಎಬಿಸಿ ಕೇಂದ್ರದ ನೂತನ ಕಟ್ಟಡ.
ಮುಳಿಯರಿನ ಎಬಿಸಿ ಕೇಂದ್ರದ ನೂತನ ಕಟ್ಟಡ.
  • ಡಾ.ಪ್ರಶಾಂತ್ ಪಿ, ಸಹಾಯಕ ನಿರ್ದೇಶಕ, ಪಶು ಸಂಗೋಪನಾ ಇಲಾಖೆ ಕಾಸರಗೋಡು
  • 2016ರಲ್ಲಿ ಸ್ಥಾಪನೆ, 2025ರಲ್ಲಿ ಮುಳಿಯಾರಿನಲ್ಲಿ ಪುನಃ ಆರಂಭ
  • ಕಾಸರಗೋಡು, ತ್ರಿಕ್ಕರಿಯ ಕೇಂದ್ರಗಳು ಸ್ಥಗಿತ
  • 2023ರಲ್ಲಿ 11 ಸಾವಿರ ಶ್ವಾನಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net