ಆದೂರು ಕಲ್ಕುಡ-ಕಲ್ಲುರ್ಟಿ ದೈವಗಳಿಗೆ ಆಟಿ ಕೋಲ ವಾಡಿಕೆ : ಸಿಂಹ ಸಂಕ್ರಮಣದ ದಿನದಂದು ನೇಮ : ಧರ್ಮಾತೀತವಾಗಿ ಭಕ್ತರ ಭೇಟಿ

02
Published on

ಮುಳ್ಳೇರಿಯ: ಕಾಸರಗೋಡಿನ ಆದೂರು ಎಂಬಲ್ಲಿ ಆಟಿ ಆರಂಭವಾಯಿತೆಂದರೆ ಆಟಿ ಭೂತಗಳ ಆರಾಧನೆ ಆರಂಭವಾಗುತ್ತದೆ. ಅದರಲ್ಲಿಯೂ ಆದೂರು ಕಲ್ಲುರ್ಟಿ-ಕಲ್ಕುಡ ದೈವಸ್ಥಾನದಲ್ಲಿ ಆಟಿ ತಿಂಗಳು ಪೂರ್ತಿ ದೈವದ ಕೋಲ ನಡೆಯುವುದೇ ವಿಶೇಷ.

400 ವರ್ಷಗಳ ಹಿಂದೆ ಘಟ್ಟದಿಂದ ಇಳಿದುಬಂದ ಕಲ್ಲುರ್ಟಿ-ಕಲ್ಕುಡ ದೈವಗಳಿಗೆ ಆದೂರು ಏಳ್ನಾಡುಗುತ್ತಿನಲ್ಲಿ ಆಶ್ರಯ ನೀಡಲಾಗುತ್ತದೆ ಎಂಬುದು ಪ್ರತೀತಿ. ಪಟೇಲ ನಾರಾಯಣ ಭಂಡಾರಿ ನಿಧನರಾದ ಬಳಿಕ ಕೋಲಗಳ ಉಸ್ತುವಾರಿಯನ್ನು ಪುತ್ರ ಎ.ಜಿ.ಪ್ರಕಾಶ ಭಂಡಾರಿ ನೋಡಿಕೊಳ್ಳುತ್ತಿದ್ದರು. ಕಳೆದ ಕೆಲವು ವರ್ಷಗಳಿಂದ ಗುತ್ತಿನ ಹಿರಿಯರಾದ ರತ್ನಾಕರ ರೈ ಅವರ ನೇತೃತ್ವದಲ್ಲಿ ಬಿಪಿನ್ ದಾಸ್ ರೈಗಳ ಉಸ್ತುವಾರಿಯಲ್ಲಿ ಕೋಲಗಳು ನಡೆಯುತ್ತಿವೆ.

ಈ ವರ್ಷದ ದೈವದ ಕೋಲಗಳು ಆಷಾಢ ಅಥವಾ ಆಟಿ ಒಂದರಂದು ಆರಂಭಗೊಳ್ಳದೆ ಜು.24ರಂದು ಸಂಜೆ ಸೇರಿ 25ರಿಂದ ಆರಂಭಗೊಳ್ಳಲಿದೆ. ಮುಂದಿನ ಸಂಕ್ರಮಣದ ತನಕ(ಆ.16) ದೈವದ ಕೋಲಗಳು ನಡೆಯಲಿವೆ. ಆಟಿ ಒಂದರಂದು ಆರಂಭಗೊಂಡು ಸಂಕ್ರಮಣದ ತನಕ ಇಲ್ಲಿ ನಡೆಯುವುದು ವಾಡಿಕೆಯಾದರೂ ಈ ಬಾರಿ ಅನಿವಾರ್ಯ ಕಾರಣಗಳಿಂದ ಒಂದು ವಾರಗಳಷ್ಟು ತಡವಾಗಿ ಕೋಲಗಳು ಆರಂಭಗೊಳ್ಳಲಿದೆ. ಕೋಲಗಳೆಲ್ಲ ಹರಕೆ ಕೋಲಗಳೆನ್ನುವುದು ಒಂದು ವಿಶೇಷ. ಸೋಮವಾರ ದೈವಕ್ಕೆ ಬಾರಣೆ ಕೊಡುವ ಸಂಪ್ರದಾಯವಿಲ್ಲ ಎಂಬ ಕಾರಣ ಈ ದಿನ ಕೋಲ ನಡೆಯುವುದಿಲ್ಲ. ಮೊದಲ ದಿನ ಆದೂರು ಗುತ್ತು ತರವಾಡಿನವರಿಂದ ಹುತ್ತರಿ ಕೋಲ ನಡೆಯುವುದು ವಾಡಿಕೆ. ಉಳಿದ ಒಂದೊಂದು ದಿನಗಳಲ್ಲಿ ವರ್ಷ ಮುಂಚಿತವಾಗಿ ತಮ್ಮ ಹೆಸರು ನೋಂದಾಯಿಸಿದ ಭಕ್ತಾದಿಗಳಿಂದ ಹರಕೆ ಕೋಲಗಳು ನಡೆಯುತ್ತವೆ.

ಎರಡನೇ ದಿನ ಚಳ್ಳಂಗೋಡು ಬಾರಿಗೆಯವರಿಂದ ಮಧು ಹುತ್ತರಿಕೋಲ ನಡೆಯುತ್ತದೆ. ಉಳಿದ ಎಲ್ಲಾ ದಿನಗಳಲ್ಲಿ ಹರಕೆ ಕೋಲಗಳು ನಡೆಯುತ್ತದೆ. ಕೊನೆಯ ದಿನ ಅಂದರೆ ಸಿಂಹ ಸಂಕ್ರಮಣದ ದಿನದಂದು ಕಲ್ಲುರ್ಟಿ ಹಾಗು ಕಲ್ಕುಡ ದೈವಗಳ ನೇಮ ನಡೆಯುತ್ತದೆ. ಪ್ರತಿದಿನ ಬೆಳಗ್ಗೆ 9.30ಕ್ಕೆ ಆರಂಭಗೊಂಡು ಮಧ್ಯಾಹ್ನ 12ಕ್ಕೆ ಕೋಲ ಮುಕ್ತಾಯಗೊಳ್ಳುತ್ತದೆ. ಕೊನೆಯ ದಿನ ಸಂಜೆ 4ರ ತನಕ ಮುಂದುವರಿಯುತ್ತದೆ.

ಹರಕೆ ಸಲ್ಲಿಸುವುದು

ಗ್ರಾಮ ನಿವಾಸಿಗಳು ಧರ್ಮಾತೀತವಾಗಿ ಈ ದೈವಸ್ಥಾನಕ್ಕೆ ಬಂದು ಹರಕೆ ಸಲ್ಲಿಸುತ್ತಾರೆ. ದೈವಕ್ಕೆ ಪಟ್ಟೆ ಸೀರೆ, ಬೆಳ್ಳಿಬಂಗಾರದ ಹೂ, ಸವ್ಮಾನ(5 ಕುಡ್ತೆ ಅಕ್ಕಿ, ಕೋಳಿ, ಅಡುಗೆಗೆ ಬೇಕಾದ ಸಂಬಾರ ವಸ್ತುಗಳು), ಅವರವರ ಸಂಕಲ್ಪದಂತೆ ಆಭರಣ, ಹಣ, ಅಕ್ಕಿ, ಭಂಡಾರ ಕಾಣಿಕೆ, ವಸ್ತು ರೂಪದಲ್ಲಿ ಹರಕೆ ನೀಡಲಾಗುತ್ತದೆ.

ಹೆಣ್ಣು ಕೋಳಿಯೇ ಹೆಚ್ಚು

ವರ್ಷಂಪ್ರತಿ ಇಲ್ಲಿಗೆ ಸರಾಸರಿ 800ರಷ್ಟು ಕೋಳಿಗಳು ಹರಕೆ ರೂಪದಲ್ಲಿ ಸಲ್ಲಿಕೆಯಾಗುತ್ತದೆ. ಅದರಲ್ಲೂ ಬಹುತೇಕ ಹೆಣ್ಣು ಕೋಳಿಗಳು! ಒಂದು ನಿರ್ದಿಷ್ಟ(ದಲಿತ) ವರ್ಗಕ್ಕೆ ಸೇರಿದ ಜನರು ವಿವಾಹದ ಸಂದರ್ಭ ವರದಕ್ಷಿಣೆ ರೂಪದಲ್ಲಿ ಲಭಿಸುವ ಹಣದಿಂದ 14 ರೂ. ಗಂಟಿನಲ್ಲಿ 7 ರೂ.ವನ್ನು ದೈವಕ್ಕೆ ಅರ್ಪಿಸುವುದು ಇಲ್ಲಿನ ವಿಶೇಷತೆ.

ಕೋರಿ ಪುಂಡಿ ಪ್ರಸಾದ

ಹರಕೆಯಾಗಿ ಬಂದ ಅಕ್ಕಿಯಿಂದ ಮಾಡಿದ ಕಡುಬು(ಪುಂಡಿ) ಹಾಗು ಹರಕೆಯಾಗಿ ಬಂದ ಕೋಳಿಯ ಪದಾರ್ಥವೇ ಇಲ್ಲಿಗೆ ಬರುವ ಭಕ್ತರಿಗೆ ನೀಡುವ ಪ್ರಸಾದ. ಸಾಧಾರಣವಾಗಿ 10 ಮುಡಿ ಅಕ್ಕಿಯ ಕಡುಬನ್ನು ತಯಾರಿಸುತ್ತಾರೆ. ದೈವದ ನೇಮ ಮುಕ್ತಾಯಗೊಂಡ ಮೇಲೆ ಭಕ್ತರಿಗೆ ಇದನ್ನು ಹಂಚಲಾಗುತ್ತದೆ. ನಲಿಕೆ ಸಮುದಾಯಕ್ಕೆ ಸೇರಿದವರು ಕಲ್ಕುಡ - ಕಟ್ಟುರ್ಟಿ ದೈವಗಳ ಕೋಲಕಟ್ಟುತ್ತಾರೆ. ಸುಮಾರು 300 ಮಂದಿ ದೈವ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ. ಇವರದು ಉಚಿತ ಸೇವೆ.

ಸುಮಾರು 56 ತಲೆಮಾರಿನ ಹಿಂದೆಯೇ (ಸುಮಾರು 400 ವರ್ಷ) ಈ ದೈವಗಳು ಇಲ್ಲಿ ನೆಲೆಗೊಂಡಿತೆಂಬುದು ಐತಿಹ್ಯ. ಘಟ್ಟದಿಂದ ಇಳಿದು ಬಂದ ಕಲ್ಕುಡ ಮತ್ತು ಕಲ್ಲುರ್ಟಿ ದೈವಗಳಿಗೆ ಅಡೂರಿನ ಹಿರಿಯ ವ್ಯಕ್ತಿಯೊಬ್ಬರು ಆಶ್ರಯ ನೀಡದಿದ್ದಾಗ ಆದೂರು ಏಳ್ನಾಡು ಗುತ್ತಿಗೆ ಬಂದು ನೆಲೆಗೊಂಡಿರಬೇಕು. ಬಿಪಿನ್ ದಾಸ್, ಗುತ್ತಿನ ಉಸ್ತುವಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net