

ಮಂಗಳೂರು: ಸೈಬರ್ ಪೊಲೀಸ್ ಅಧಿಕಾರಿಯ ಹೆಸರಿನಲ್ಲಿ ಬೆದರಿಸಿ ಹಣ ವರ್ಗಾಯಿಸಿಕೊಂಡು ವಂಚಿಸಿದ ಆರೋಪಿಯನ್ನು ಸೆನ್ ಪೊಲೀಸರು ಬಂಧಿಸಿದ್ದಾರೆ.
ತುಮಕೂರಿನ ಕೋತಿತೋಪು ಬಾರ್‌ಲೈನ್ ನಿವಾಸಿ ಅರುಣ್ ಟಿ. (27) ಬಂಧಿತ ಆರೋಪಿ. ತುಮಕೂರಿನಲ್ಲಿ ಬಂಧಿಸಿ, ಕರೆ ತಂದು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಧೀಶರು ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
ಜು.2ರಂದು ಅಪರಿಚಿತ ವ್ಯಕ್ತಿ ದೂರುದಾರರಿಗೆ ಕರೆ ಮಾಡಿ ಆತನನ್ನು ಬೆಂಗಳೂರು ಸೈಬರ್ ಪೊಲೀಸ್ ಆಫೀಸರ್ ಸುಶೀಲ್ ಕುಮಾರ್ ಎಂದು ಪರಿಚಯಿಸಿಕೊಂಡು ‘ನಿಮ್ಮ ಮೇಲೆ ಎಫ್‌ಐಆರ್ ದಾಖಲಾಗಿ ಸೈಬರ್ ಠಾಣೆಯಲ್ಲಿ ತನಿಖೆಯಲ್ಲಿದೆ. ಕೇಸ್‌ನ್ನು ತೆಗೆಯಬೇಕಾದರೆ ಹಣ ನೀಡಬೇಕು. ಗೂಗಲ್ ಪೇ ಮಾಡಬೇಕು’ ಎಂದು ತಿಳಿಸಿದ. ಇದರಿಂದ ಭಯಗೊಂಡ ದೂರುದಾರರು ಅವರ ಬಳಿ ಇದ್ದ 2,000 ರೂ.ಗಳನ್ನು ತನ್ನ ಪರಿಚಿತರಿಗೆ ನೀಡಿ ಅವರಿಂದ ಗೂಗಲ್ ಪೇ ಮಾಡಿಸಿದರು. ಅನಂತರ ಆರೋಪಿಗಳು ಪದೇ ಪದೇ ಕರೆ ಮಾಡಿ ಬೆದರಿಸಿದ್ದರು. ಹಾಗಾಗಿ ದೂರುದಾರರು ಜು.2ರಿಂದ ಜು.6ರವರೆಗೆ ಹಂತಹಂತವಾಗಿ ಒಟ್ಟು 1.23 ಲ.ರೂ.ಗಳನ್ನು ವರ್ಗಾಯಿಸಿದ್ದಾರೆ. ಈ ಬಗ್ಗೆ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈತನ ವಿರುದ್ಧ ಒಟ್ಟು 11 ಪ್ರಕರಣ ದಾಖಲಾಗಿವೆ.