

ದೇವದುರ್ಗ: ಪ್ರತಿಯೊಂದು ಶಾಲೆಗೆ ಶುದ್ಧ ಕುಡಿವ ನೀರು, ಶೌಚಗೃಹ ಸೇರಿ ಅಗತ್ಯ ಮೂಲಸೌಲಭ್ಯ ಕಲ್ಪಿಸಿ ಎಂದು ಜೆಎಂಎಫ್‌ಸಿ ನ್ಯಾಯಾಧೀಶ ಬಾಳಸಾಹೇಬ್ ವಡವಡೆ ಸೂಚನೆ ನೀಡಿದರು.
ಪುರಸಭೆ ವ್ಯಾಪ್ತಿಯ ಆರೇರ್‌ದೊಡ್ಡಿ ಹಾಗೂ ಬೂದೆಪ್ಪ ತಾಂಡಾದ ಸರ್ಕಾರಿ ಪ್ರಾಥಮಿಕ ಶಾಲೆಗೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು. ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ಸಮಸ್ಯೆ ಎದುರಿಸುತ್ತಿರುವ ದೂರುಗಳಿವೆ. ನೀವು ಏನ್ ಮಾಡುತ್ತಿದ್ದೀರಿ?. ಸಮಸ್ಯೆ ಇರುವ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ನೋವಿಗೆ ಸ್ಪಂದಿಸಿ ಎಂದು ಬಿಇಒಗೆ ತಾಕೀತು ಮಾಡಿದರು.
ಹಲವು ಶಾಲೆಗಳಲ್ಲಿ ಕುಡಿವ ನೀರಿನ ಸಮಸ್ಯೆ ತೀವ್ರವಾಗಿದೆ. ಶುದ್ಧ ನೀರು ಕುಡಿಯುವುದು ಮಗುವಿನ ಹಕ್ಕು. ಶೌಚಗೃಹ ದುರಸ್ತಿ ಮಾಡಿ, ಸಮರ್ಪಕವಾಗಿ ಬಳಕೆಯಾಗುವಂತೆ ನೀರು, ನೆರಳು ಹಾಗೂ ಬಾಗಿಲು ವ್ಯವಸ್ಥೆ ಕಲ್ಪಿಸಬೇಕು. ಮಕ್ಕಳಿಗೆ ಗುಣಮಟ್ಟದ ಬಿಸಿಯೂಟ ನೀಡಬೇಕು. ಶಾಲಾ ವಾತಾವರಣ ಸ್ವಚ್ಛತೆ, ವಿದ್ಯುತ್, ಸುಣ್ಣ ಬಣ್ಣ ವ್ಯವಸ್ಥೆ ಮಾಡಬೇಕು. ಮಳೆಗೆ ಸೋರದಂತೆ ಶಾಲೆಗಳನ್ನು ರಕ್ಷಣೆ ಮಾಡಬೇಕು ಎಂದು ಸೂಚಿಸಿದರು.
ಮೆಚ್ಚುಗೆ: ಆರೇರ್ ದೊಡ್ಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಪರಿಸರಕ್ಕೆ ನ್ಯಾಯಾಧೀಶರು ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲಾವರಣದಲ್ಲಿ ಉತ್ತಮವಾದ ಗಿಡಗಳನ್ನು ಬೆಳೆಸಿ ಸ್ವಚ್ಛತೆ ಕಾಪಾಡಲಾಗಿದೆ. ಮೈದಾನ ವ್ಯವಸ್ಥೆ, ಊಟಕ್ಕೆ ಕುಳಿತುಕೊಳ್ಳು ಸ್ಥಳ, ಶಾಲಾ ಗೋಡೆಗಳ ಮೇಲೆ ವಿವಿಧ ಚಿತ್ರಗಳ ಬಿಡಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ಬಿಇಒ ಎಚ್.ಸುಖದೇವ್, ಸಮನ್ವಯಾಧಿಕಾರಿ ಶಿವರಾಜ ಪೂಜಾರಿ, ಸಿಆರ್‌ಪಿ ಬಾಬು ಹಡಗಲಿ, ಮಂಜುನಾಥ, ಶಿಕ್ಷಕರಾದ ಗೋವಿಂದ್ ರಾಜ್, ಅಂಗನವಾಡಿ ಕಾರ್ಯಕರ್ತೆ ಕೌಶರ್‌ಬೇಗಂ ಇತರರಿದ್ದರು.