

ಬಾಗಲಕೋಟೆ: ಜಿಲ್ಲಾ ಕೇಂದ್ರ ಸ್ಥಾನ ಬಾಗಲಕೋಟೆಗೆ ಮೂಲ ಸೌಕರ್ಯ ಒದಗಿಸಬೇಕು ಎಂದು ಆಗ್ರಹಿಸಿ ಎಎಪಿ ಜಿಲ್ಲಾ ಘಟಕ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು.
ಪ್ರತಿಭಟನಾ ಮೆರವಣಿಗೆ ಮೂಲಕ ನಗರಸಭೆ ಆರ್.ವಾಸಣ್ಣ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಎಎಪಿ ಜಿಲ್ಲಾಧ್ಯಕ್ಷ ರಮೇಶ ಬದ್ನೂರ ಮಾತನಾಡಿ, ಬಾಗಲಕೋಟೆ ನಗರಸಭೆ ಕಳೆದ ೨೦-೨೫ ವರ್ಷಗಳಿಂದ ಶುದ್ಧ ಕುಡಿಯುವ ನೀರು, ಚರಂಡಿ, ರಸ್ತೆ ಮತ್ತು ಬೀದಿ ದೀಪಗಳಂತಹ ಕನಿಷ್ಟ ಸೌಲಭ್ಯಗಳನ್ನು ಜನತೆಗೆ ಕೊಡಲು ವಿಫಲವಾಗಿದೆ. ಇದು ಶಾಸಕರು ಸೇರಿದಂತೆ ನಗರಸಭೆ ಸದಸ್ಯರ ನಿರ್ಲಕ್ಷ್ಯ, ಜನ ವಿರೋಧಿ ನೀತಿಯೇ ಕಾರಣವಾಗಿದೆ ಎಂದು ಆರೋಪಿಸಿದರು.
ಮೂಲ ಸೌಕರ್ಯಗಳ ಸೃಷ್ಟಿ ಮತ್ತು ನಿರ್ವಹಣೆಗೆ ಸರ್ಕಾರದಿಂದ ಬರುತ್ತಿರುವ ಅನುದಾನದ ಸದ್ಬಳಕೆ ಆಗುತ್ತಿಲ್ಲ. ಕೆಲವು ಪ್ರದೇಶಗಳಲ್ಲಿ ಮಾತ್ರ ಮೂಲ ಸೌಕರ್ಯ ಒದಗಿಸಿ ಹಿಂದುಳಿದ ಪ್ರದೇಶಕ್ಕೆ ತಾರತಮ್ಯ ಮಾಡಲಾಗುತ್ತಿದೆ. ವಾಂಬೆ ಕಾಲೋನಿ, ರಾಜೀವ್ ಗಾಂಧಿ ಕಾಲೋನಿ, ವಾಜಪೇಯಿ ಕಾಲೋನಿ, ಕಿಲ್ಲಾ, (ನಡುಗಡ್ಡೆ) ಕುಂಬಾರ ಮಡೂ, ಟೆಂಗಿನಮಠ, ಸಾಬಣ್ಣ ಬಡಾವಣೆ, ಕೌಲಪೇಟೆ, ಝಂಡಾ ಗಲ್ಲಿ, ಶಿರೂರ ಅಗಸಿ, ಪೋಲಿಸ್ ಕ್ವಾರ್ಟರ್ಸ ಇದಕ್ಕೆ ನೈಜ ಉದಾಹರಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಳುಗಡೆಯಾದಂಥ ಪ್ರದೇಶಗಳಲ್ಲಿ ಅವೈಜ್ಞಾನಿಕವಾಗಿ ಸಿಸಿ ರಸ್ತೆಗಳನ್ನು ನಿರ್ಮಾಣ ಮಾಡಲಾಗಿದೆ. ಆಡಳಿತ ಪಕ್ಷದ ಕೆಲವು ವಾರ್ಡುಗಳಿಗೆ ಕೋಟಿ ಕೋಟಿ ರೂಪಾಯಿ ಅನುದಾನ ನೀಡಿದ್ದರೂ ಅಲ್ಲಿನ ಅಭಿವೃದ್ಧಿ ಶೂನ್ಯವಾಗಿದೆ. ನವನಗರದ ಅನೇಕ ಸೆಕ್ಟರುಗಳಲ್ಲಿ ಬೀದಿ ದೀಪಗಳು ಕಾರ್ಯನಿರ್ವಹಿಸುತ್ತಿಲ್ಲ. ಇದನ್ನು ಅಧಿಕಾರಿಗಳು ಹಾಗೂ ನಗರಸಭೆ ಸದಸ್ಯರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.
ಈ ಹಿಂದೆ ಸ್ಥಾಪಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಬಹುತೇಕ ಘಟಕಗಳು ಕಾರ್ಯ ನಿರ್ವಹಿಸುತ್ತಿಲ್ಲ. ಗೃಹಬಳಕೆಗೂ ಕೂಡ ಸಮರ್ಪಕವಾಗಿ ನೀರು ಪೂರೈಕೆ ಆಗುತ್ತಿಲ್ಲ.
ಸ್ಲಂಗಳಲ್ಲಿ ವಾಸಿಸುತ್ತಿರುವ ಬಡ ಜನರಿಗೆ ಸೂರು ಕಲ್ಪಿಸುವ ಉದ್ದೇಶದಿಂದ ನಿರ್ಮಾಣ ಆಗಿರುವ ಮತ್ತು ಆಗುತ್ತಿರುವ ಸ್ಲಂ ಬೋರ್ಡ್ ನ ಮನೆಗಳನ್ನು ಮಂಜೂರು ಮಾಡುವಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಹಾಗೂ ಸ್ವಜನ ಪಕ್ಷಪಾತ ನಡೆದಿದ್ದು, ಇದರಿಂದ ಯೋಗ್ಯ ಫಲಾನುಭವಿಗಳಿಗೆ ಘೋರ ಅನ್ಯಾಯವಾಗಿದೆ ಎಂದು ದೂರಿದರು.
ಎಸ್.ಡಿ.ಜೋಗಿನ, ಮಾಧವಿ ರಾಠೋಡ, ಮಲ್ಲಿಕಾರ್ಜುನ ಕಲಾದಗಿ, ನಾಗರಾಜ ಹೊಂಗಲ್, ಆತ್ಮರಾಮ ನೀಲನಾಯಕ, ವೆಂಕಟೇಶ ದೇಶಪಾಂಡೆ, ಲತಿಫ ಗಾಢೆ, ವೀರಣ್ಣ ಬಣಗಾರ, ಮಂಜುನಾಥ ಪವಾರ, ವಿಠ್ಠಲ ಲಮಾಣಿ ಇತರರು ಇದ್ದರು.