

ಹಾಸನ: ಹಾಸನಾಂಬ ಉತ್ಸವದ ಸಿದ್ಧತೆಯ ನಡುವೆಯೇ ಸ್ಥಳೀಯ ನಿವಾಸಿಗಳನ್ನು ಕಡೆಗಣಿಸಿ, ಅವರಿಗೆ ತೊಂದರೆ ನೀಡಲಾಗುತ್ತಿದೆ ಎಂದು ಆರೋಪಿಸಿ ಆಮ್ ಆದ್ಮಿ ಪಕ್ಷದ ವತಿಯಿಂದ ದೇವಾಲಯದ ಎದುರು ಗುರುವಾರ ಪ್ರತಿಭಟನೆ ನಡೆಸಲಾಯಿತು. ಪಕ್ಷದ ರಾಜ್ಯ ಉಪಾಧ್ಯಕ್ಷ ಅಗಿಲೆ ಯೋಗೇಶ್ ಮಾತನಾಡಿ, ಹಾಸನಾಂಬ ಉತ್ಸವ ಹಾಸನದ ಜನರ ಹಬ್ಬ, ಆದರೆ, ಅಧಿಕಾರಿಗಳು ಇದನ್ನು ಆದಾಯದ ಮೂಲವನ್ನಾಗಿ ಮಾಡಿಕೊಂಡಿದ್ದಾರೆ. ಉತ್ಸವದ ಹೆಸರಿನಲ್ಲಿ ಸ್ಥಳೀಯರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ದೇವಾಲಯದ ಸುತ್ತಮುತ್ತಲಿನ ನಿವಾಸಿಗಳು ತಮ್ಮ ಮನೆಯಿಂದ ಹೊರಬರಲು ಸಾಧ್ಯವಾಗದ ಪರಿಸ್ಥಿತಿ ಇದೆ. ಎಲ್ಲೆಡೆ ಬ್ಯಾರಿಕೇಡ್ ಹಾಕಿ ಅವರನ್ನು ದಿಗ್ಬಂಧನಕ್ಕೆ ಒಳಪಡಿಸಲಾಗಿದೆ ಎಂದು ದೂರಿದರು. ಇಲ್ಲಿನ ಜನರಿಗೆ ಕುಡಿಯುವ ನೀರು, ಶೌಚಗೃಹ, ಸಂಚಾರಕ್ಕೆ ತೊಂದರೆ ಉಂಟು ಮಾಡಲಾಗಿದೆ. ಉತ್ಸವಕ್ಕೂ ಮೊದಲು ಸ್ಥಳೀಯರನ್ನು ಕರೆದು ಸಭೆ ನಡೆಸಿ ಅವರ ಸಮಸ್ಯೆ ಆಲಿಸಲು ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ ಎಂದರು.
ಅಧಿಕಾರಿಗಳು ದೇವಿಯ ಉತ್ಸವವನ್ನು ಸಾರ್ವಜನಿಕ ಹಬ್ಬವೆಂದು ಪರಿಗಣಿಸದೆ, ಸರ್ಕಾರದ ಮೆಚ್ಚುಗೆ ಮತ್ತು ಆದಾಯದ ದೃಷ್ಟಿಯಿಂದ ಮಾತ್ರ ಕೆಲಸ ಮಾಡುತ್ತಿದ್ದಾರೆ. ಹಾಸನಾಂಬ ಉತ್ಸವದ ಟೆಂಡರ್ ಪ್ರಕ್ರಿಯೆಯಲ್ಲಿಯೂ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದರು.
ಹಾಸನಾಂಬ ಉತ್ಸವದ ಮೂಲಕ ಸರ್ಕಾರ ಕೋಟಿ ಕೋಟಿ ರೂ. ಆದಾಯ ಪಡೆಯುತ್ತಿದೆ. ಆದರೆ, ಸ್ಥಳೀಯರಿಗೆ ಯಾವುದೇ ಪ್ರಯೋಜನ ದೊರೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾಡಳಿತ ಸ್ಥಳೀಯ ನಿವಾಸಿಗಳಿಗೆ ಪ್ರತ್ಯೇಕ ದರ್ಶನ ವ್ಯವಸ್ಥೆ ಕಲ್ಪಿಸಬೇಕು, ಅವರ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.